ಅಮೆರಿಕ| ಪತ್ನಿ ಮತ್ತು ಮೂವರು ಸಂಬಂಧಿಕರನ್ನು ಗುಂಡಿಕ್ಕಿ ಹತ್ಯೆಗೈದ ಭಾರತೀಯ ಮೂಲದ ವ್ಯಕ್ತಿ

ವಿಜಯ್ ಕುಮಾರ್ ಮತ್ತು ಮೀಮು ಡೋಗ್ರಾ (Photo: facebook)
ನ್ಯೂಯಾರ್ಕ್: ಅಮೆರಿಕದ ಜಾರ್ಜಿಯಾದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಅವರ ಮೂವರು ಸಂಬಂಧಿಕರನ್ನು ಮನೆಯೊಳಗೆ ಗುಂಡಿಕ್ಕಿ ಹತ್ಯೆ ಮಾಡಿದ್ದು, ಆತನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಈ ವಿಷಯವು ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದ್ದಾಗಿದ್ದು, ಆರೋಪಿ ವಿಜಯ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಸಮಯದಲ್ಲಿ, ಮೂವರು ಮಕ್ಕಳು ಮನೆಯೊಳಗೆ ಕ್ಲೋಸೆಟ್ನಲ್ಲಿ ಅಡಗಿ ಕುಳಿತುಕೊಂಡಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಮೃತರನ್ನು ಕುಮಾರ್ ಪತ್ನಿ ಮೀಮು ಡೋಗ್ರಾ (43), ಗೌರವ್ ಕುಮಾರ್ (33), ನಿಧಿ ಚಂದರ್ (37) ಮತ್ತು ಹರೀಶ್ ಚಂದರ್ (38) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಟ್ಲಾಂಟಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಈ ಕುರಿತು ಪ್ರತಿಕ್ರಿಯಿಸಿ, ಮೃತರ ಕುಟುಂಬಕ್ಕೆ ಸಾಧ್ಯವಿರುವ ಎಲ್ಲಾ ಸಹಾಯವನ್ನು ನೀಡುವುದಾಗಿ ಭರವಸೆ ನೀಡಿದೆ.
ಬ್ರೂಕ್ ಐವಿ ಕೋರ್ಟ್ನ 1000 ಬ್ಲಾಕ್ನಲ್ಲಿ ಗುಂಡಿನ ದಾಳಿ ನಡೆದಿರುವ ಬಗ್ಗೆ ಶುಕ್ರವಾರ ಬೆಳಗಿನ ಜಾವ 2.30ರ ಸುಮಾರಿಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ತೆರಳಿ ಪೊಲೀಸರು ಪರಿಶೀಲನೆ ನಡೆಸಿದಾಗ ನಾಲ್ವರ ಮೃತದೇಹ ಪತ್ತೆಯಾಗಿತ್ತು ಎಂದು ವರದಿಯಾಗಿದೆ.





