ಬಹಾಮಾಸ್ ನ ಹೋಟೆಲ್ ಬಾಲ್ಕನಿಯಿಂದ ಬಿದ್ದು ಭಾರತೀಯ ಮೂಲದ ಕಾಲೇಜು ವಿದ್ಯಾರ್ಥಿ ಮೃತ್ಯು
ಮೇ 17ರಂದು ಪದವಿ ಪಡೆಯಲಿದ್ದ ಗೌರವ್

Photo : LinkedIn/Gaurav Jaisingh
ನ್ಯೂಯಾರ್ಕ್: ಬಹಾಮಾಸ್ ನ ಹೋಟೆಲ್ ಬಾಲ್ಕನಿಯಿಂದ ಬಿದ್ದು ಭಾರತೀಯ ಮೂಲದ ಕಾಲೇಜು ವಿದ್ಯಾರ್ಥಿ ಮೃತಪಟ್ಟಿದ್ದಾರೆ. ಮೃತ ವಿದ್ಯಾರ್ಥಿಯನ್ನು ಗೌರವ್ ಜೈಸಿಂಗ್ ಎಂದು ಗುರುತಿಸಲಾಗಿದೆ.
ಗೌರವ್ ಅವರು ಕೆಲವೇ ದಿನಗಳಲ್ಲಿ ಪದವಿ ಪಡೆಯಲಿದ್ದರು. ಮೇ 17ಕ್ಕೆ ಅವರ ಪದವಿ ಪ್ರಮಾಣ ಕಾರ್ಯಕ್ರಮವಿತ್ತು ಎಂದು ತಿಳಿದು ಬಂದಿದೆ.
ಗೌರವ್ ಜೈಸಿಂಗ್ ಅವರ ಕುಟುಂಬವು ಅಮೆರಿಕದ ಮ್ಯಾಸಚೂಸೆಟ್ಸ್ನ ಶ್ರೂಸ್ಬರಿಯದಲ್ಲಿ ನೆಲೆಸಿದೆ. ಗೌರವ್ ಮ್ಯಾಸಚೂಸೆಟ್ಸ್ನ ವಾಲ್ಥಮ್ನಲ್ಲಿರುವ ಬೆಂಟ್ಲಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದು, ಹಿರಿಯ ವಿದ್ಯಾರ್ಥಿಗಳ ವಾರ್ಷಿಕ ಪ್ರವಾಸದ ವೇಳೆ ಬಹಾಮಾಸ್ ನಲ್ಲಿದ್ದಾಗ ರವಿವಾರ ಈ ಘಟನೆ ಸಂಭವಿಸಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬೆಂಟ್ಲಿ ವಿಶ್ವವಿದ್ಯಾಲಯವು, "ನಮ್ಮ ಪಾಲಿಗೆ ಕೆಲವು ಕಷ್ಟಕರ ದಿನಗಳು ಬಂದಿದೆ. ಗೌರವ್ ಜೈಸಿಂಗ್ ಅವರನ್ನು ಕಳೆದುಕೊಂಡಿರುವುದಕ್ಕೆ ನಾವು ಅಪಾರ ನೋವನ್ನು ಅನುಭವಿಸುತ್ತಿದ್ದೇವೆ. ಅದೊಂದು ಭಾವುಕ ಕ್ಷಣ. ಗೌರವ್ ಅವರ ಕುಟುಂಬ ಮತ್ತು ಸ್ನೇಹಿತರಿಗೆ ನಮ್ಮ ಹೃದಯಗಳು ಮಿಡಿಯುತ್ತವೆ. ಮೇ 17 ರಂದು ನಿಗದಿಯಾಗಿರುವ ಪದವಿಪೂರ್ವ ಪದವಿ ಸಮಾರಂಭದಲ್ಲಿ ಗೌರವ್ ಅವರಿಗೆ ಗೌರವ ಸಲ್ಲಿಸಲಾಗುವುದು”, ಎಂದು ತಿಳಿಸಿದೆ.
ಮೇ 11 ರಂದು ನಡೆದಿರುವ ಈ ಘಟನೆ ಕುರಿತು ರಾಯಲ್ ಬಹಾಮಾಸ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಗಳ ಪ್ರಕಾರ ಗೌರವ್ ಆಕಸ್ಮಿಕವಾಗಿ ಬಾಲ್ಕನಿಯಿಂದ ಕೆಳೆಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ರಾತ್ರಿ 10 ಗಂಟೆ ಸುಮಾರಿಗೆ, ಗೌರವ್ ರೂಮ್ಮೇಟ್ಗಳೊಂದಿಗೆ ತನ್ನ ಹೋಟೆಲ್ ಕೋಣೆಯೊಳಗೆ ಇದ್ದಾಗ ಆಕಸ್ಮಿಕವಾಗಿ ಮೇಲಿನ ಮಹಡಿಯ ಬಾಲ್ಕನಿಯಿಂದ ಕೆಳಗೆ ಬಿದ್ದರು. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ದಾರಿ ಮಧ್ಯೆ ಅವರು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.







