ಬ್ರಿಟನ್: 7 ನವಜಾತ ಶಿಶುಗಳ ಹತ್ಯೆ ಮಾಡಿದ ನರ್ಸ್ ಬಂಧನಕ್ಕೆ ನೆರವಾದ ಭಾರತೀಯ ಮೂಲದ ವೈದ್ಯ

ಡಾ. ರವಿ ಜಯರಾಮ್ (Photo: Facebook/Dr Ravi Jayaram)
ಲಂಡನ್: ಬ್ರಿಟನ್ ನಲ್ಲಿ ಏಳು ಮಕ್ಕಳನ್ನು ಕೊಂದಿದ್ದ ಆರೋಪ ಎದುರಿಸುತ್ತಿದ್ದ ಶುಶ್ರೂಷಕಿಯೊಬ್ಬಳ ಅಪರಾಧವು ಬ್ರಿಟನ್ ನ್ಯಾಯಾಲಯದಲ್ಲಿ ಸಾಬೀತಾಗಿದೆ. ಈ ಶುಶ್ರೂಷಕಿಯ ಅಪರಾಧ ಕೃತ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿ, ಆಕೆ ದೋಷಿ ಎಂದು ನ್ಯಾಯಾಲಯದಿಂದ ತೀರ್ಪು ಬರುವಲ್ಲಿ ಪ್ರಮುಖ ವಹಿಸಿರುವುದು ಉತ್ತರ ಇಂಗ್ಲೆಂಡ್ ನ ಆಸ್ಪತ್ರೆಯೊಂದರಲ್ಲಿ ಮಕ್ಕಳ ತಜ್ಞರಾಗಿರುವ ಭಾರತೀಯ ಸಂಜಾತ ವೈದ್ಯರಾಗಿರುವುದು ವಿಶೇಷವಾಗಿದೆ ಎಂದು indianexpress.com ವರದಿ ಮಾಡಿದೆ.
ನನ್ನ ಸಹೋದ್ಯೋಗಿಯಾಗಿದ್ದ ಮಾಜಿ ಶುಶ್ರೂಷಕಿ ಲೂಸಿ ಲೆಟ್ಬಿ ಕುರಿತ ನನ್ನ ಕಳವಳಕ್ಕೆ ಕಿವಿಗೊಟ್ಟಿದ್ದರೆ ಹಾಗೂ ಈ ಕುರಿತು ಪೊಲೀಸರನ್ನು ತಕ್ಷಣವೇ ಎಚ್ಚರಿಸಿದ್ದರೆ, ಸಾವಿಗೀಡಾದ ಮಕ್ಕಳ ಪೈಕಿ ಕೆಲವು ಮಕ್ಕಳ ಜೀವವನ್ನಾದರೂ ರಕ್ಷಿಸಬಹುದಿತ್ತು ಎಂದು ಚೆಸ್ಟರ್ ನಲ್ಲಿರುವ ಕೌಂಟೆಸ್ ಆಫ್ ಚೆಸ್ಟರ್ ಆಸ್ಪತ್ರೆಯ ವೈದ್ಯರಾದ ರವಿ ಜಯರಾಮ್ ವಿಷಾದಿಸಿದ್ದಾರೆ.
ಏಳು ನವಜಾತ ಶಿಶುಗಳ ಹತ್ಯೆ ಹಾಗೂ ಇತರ ಆರು ನವಜಾತ ಶಿಶುಗಳ ಹತ್ಯೆಗೆ ಏಳು ಬಾರಿ ಪ್ರಯತ್ನಿಸಿದ ಆರೋಪದಲ್ಲಿ ಲೆಟ್ಬಿ (33) ದೋಷಿ ಎಂದು ಮ್ಯಾಂಚೆಸ್ಟರ್ ಕ್ರೌನ್ ಕೋರ್ಟ್ ತೀರ್ಪು ನೀಡಿದೆ. ಸೋಮವಾರದಂದು ಅದೇ ನ್ಯಾಯಾಲಯದಲ್ಲಿ ಆಕೆಯ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.