ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಭಾರತೀಯ ಮೂಲದ ಫೈಝಾನ್ ಝಾಕಿ ಚಾಂಪಿಯನ್

ಫೈಝಾನ್ ಝಾಕಿ | PC : X
ಮೇರಿಲ್ಯಾಂಡ್: ಅಮೆರಿಕದ 2025ನೇ ಸಾಲಿನ ‘ಸ್ಕ್ರಿಪ್ಸ್ ನ್ಯಾಶನಲ್ ಸ್ಪೆಲ್ಲಿಂಗ್ ಬೀ ’ ಸ್ಪರ್ಧೆಯಲ್ಲಿ ಹೈದರಾಬಾದ್ ಮೂಲದ 13 ವರ್ಷ ವಯಸ್ಸಿನ ಬಾಲಕ ಫೈಝಾನ್ ಝಾಕಿ ವಿಜೇತರಾಗಿದ್ದಾರೆ.
ಅಮೆರಿಕದ 240ಕ್ಕೂ ಅಧಿಕ ಬಾಲ ಸ್ಪರ್ಧಿಗಳನ್ನು ಮೀರಿಸಿ ಅವರು ಚಾಂಪಿಯನ್ ಶಿಪ್ ಪದಕವನ್ನು ಪಡೆದಿದ್ದಾರೆ. 20ನೇ ಸುತ್ತಿನಲ್ಲಿ ನಡೆದ ರೋಚಕ ಸ್ಪರ್ಧೆಯಲ್ಲಿ ಅವರು ‘eclaircissement' ಪದದ ಸ್ಪೆಲ್ಲಿಂಗ್ ಅನ್ನು ಉಚ್ಛರಿಸುವ ಮೂಲಕ ಫೈನಲ್ ನಲ್ಲಿ ಗೆಲುವು ಸಾಧಿಸಿದ್ದಾರೆ ಹಾಗೂ 50 ಸಾವಿರ ಡಾಲರ್ ಮೊತ್ತದ ಪುರಸ್ಕಾರಕ್ಕೆ ಪಾತ್ರವಾಗಿದ್ದಾರೆ. ಭಾರತೀಯ ಮೂಲದ ಇನ್ನೋರ್ವ ಬಾಲಕ ಸರ್ವಜ್ಞ ಕದಂ ರನ್ನರ್ಸ್ ಅಪ್ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
`eclaircissement' (‘ಸ್ಪಷ್ಟ ವಿವರಣೆ’ ಎಂದು ಅರ್ಥ) ಪದದ ಸ್ಪೆಲ್ಲಿಂಗ್ ಅನ್ನು ಸರಿಯಾಗಿ ಉಚ್ಛರಿಸುತ್ತಿದ್ದ ಕ್ಷಣವೇ ಫೈಝಾನ್, ಸಂತಸ ತಡೆಯಲಾರದೆ ವೇದಿಕೆಯಲ್ಲಿಯೇ ಅಂಗಾತ ಮಲಗಿದಾಗ , ಇಡೀ ಸಭಾಭವನ ಎದ್ದುನಿಂತು ಕರತಾಡನದ ಮೂಲಕ ಅಭಿನಂದಿಸಿತು.
ಟೆಕ್ಸಾಸ್ ರಾಜ್ಯದ ಡಲ್ಲಾಸ್ ನಗರದ ನಿವಾಸಿಯಾದ ಫೈಝಾನ್ ಹೇಳಿದ್ದಾರೆ. ಈ ಗೆಲುವನ್ನು ಬಣ್ಣಿಸಲು ತನಗೆ ಸಾಧ್ಯವಾಗುತ್ತಿಲ್ಲ. ಇದೊಂದು ಅಚ್ಚರಿ. ಈ ಗೆಲುವನ್ನು ನಾನು ನಿರೀಕ್ಷಿಸರಲಿಲ್ಲ ಎಂದು ಅವರು ಭಾವುಕರಾದರು.
ಡಲ್ಲಾಸ್ ನ ಸಿಎಂ ರೈಸ್ ಮಿಡ್ಲ್ ಸ್ಕೂಲ್ ನ 7ನೇ ತರಗತಿಯ ವಿದ್ಯಾರ್ಥಿಯಾದ ಫೈಝಾನ್ 2019ರಲ್ಲಿ ಏಳು ವರ್ಷದವರಿದ್ದಾಗಲೇ ಸ್ಪಲ್ ಬೀ ಸ್ಪರ್ಧೆಯಲ್ಲಿ ಪಾಲ್ಗೊಂಡು 370ನೇ ಸ್ಥಾನವನ್ನು ಗಳಿಸಿದ್ದರು. 2023ರಲ್ಲಿ ಅವರು 21ನೇ ಸ್ಥಾನಕ್ಕೇರಿದ್ದರು. ಕಳೆದ ವರ್ಷ ಗೆಲುವಿಗೆ ಅತ್ಯಂತ ಸನಿಹಕ್ಕೆ ತಲುಪಿದ್ದರೂ, ರನ್ನರ್ ಅಪ್ ನಲ್ಲಿ ತೃಪ್ತಿಪಟ್ಟುಕೊಳ್ಳಬೇಕಾಯಿತು.







