ಮಾದಕ ವಸ್ತು ಕಳ್ಳಸಾಗಣೆ; ಭಾರತ ಮೂಲದ ವ್ಯಕ್ತಿ ಅಮೆರಿಕದಲ್ಲಿ ಬಂಧನ

ಒಪಿಂದರ್ ಸಿಂಗ್ PC: x.com/401_da_sarpanch
ಹೊಸದಿಲ್ಲಿ: ಐಎಸ್ಐ-ಚೀನಾ- ಕೆನಡಾ ಸಂಪರ್ಕ ಹೊಂದಿರುವ ಅಂತರರಾಷ್ಟ್ರೀಯ ಮಾದಕ ವಸ್ತು ಜಾಲವನ್ನು ಭೇದಿಸಿರುವ ಅಮೆರಿಕದ ಡ್ರಗ್ ಎನ್ಫೋರ್ಸ್ಮೆಂಟ್ ಏಜೆನ್ಸಿ (ಎಫ್ಡಿಎ) ಭಾರತ ಮೂಲದ ಕೆನಡಿಯನ್ ಗ್ಯಾಂಗ್ಸ್ಟರ್ ಒಪಿಂದರ್ ಸಿಂಗ್ ಸಿಯಾನ್ ಅಕಾ ಥಾನೋಸ್ ಎಂಬಾತನನ್ನು ಬಂಧಿಸಿದೆ. ಈತನ ನೇತೃತ್ವದ ತಂಡ ಬ್ರಿಟಿಷ್ ಕೊಲಂಬಿಯಾದಿಂದ ಜಾಗತಿಕ ಮಟ್ಟದಲ್ಲಿ ಫೆಂಟನಿಲ್ ಮತ್ತು ಮೆಟಾಫೆಟಮಿನ್ ಕಳ್ಳಸಾಗಾಣಿಕೆ ಮಾಡುತ್ತಿತ್ತು ಎಂದು ತಿಳಿದು ಬಂದಿದೆ.
ಸಿಯಾನ್ ನನ್ನು ಅರಿಝೋನಾದಲ್ಲಿ ಜೂನ್ 27ರಂದು ಬಂಧಿಸಲಾಗಿದ್ದು, ಆಸ್ಟ್ರೇಲಿಯಾಗೆ ಮೆಟಾಫೆಟಮಿನ್ ಕಳ್ಳಸಾಗಾಣಿಕೆ ಮಾಡುತ್ತಿದ್ದ ಹಾಗೂ ಕೆನಡಾ ಮೂಲಕ ಅಮೆರಿಕನ್ನು ಫೆಂಟನಿಲ್ ಗೆ ಅಗತ್ಯ ರಾಸಾಯನಿಕಗಳನ್ನು ಪೂರೈಸುತ್ತಿದ್ದ ಜಾಲದಲ್ಲಿ ಷಾಮೀಲಾದ ಆರೋಪದಲ್ಲಿ ಬಂಧಿಸಲಾಗಿದೆ.
ಈ ಜಾಲದ ಬಗ್ಗೆ 2022ರಲ್ಲೇ ತನಿಖೆ ಆರಂಭವಾಗಿದ್ದು, ಚೀನಾದ ಕಮ್ಯುನಿಸ್ಟ್ ಪಾರ್ಟಿಗೆ ಸಂಬಂಧಿಸಿದ ಮತ್ತು ಮೆಕ್ಸಿಕೋದ ಸಿನಾಲೊ ಕಾರ್ಟೆಲ್ ಗೆ ಸಂಬಂಧಿಸಿದ ರಾಸಾಯನಿಕ ಪೂರೈಕೆದಾರರ ಜತೆಗಿನ ಸಂಪರ್ಕದೊಂದಿಗೆ ಕಾರ್ಯಾಚರಣೆ ಮಾಡುತ್ತಿದ್ದ ಎಂಬ ಅಂಶವನ್ನು ಅಮೆರಿಕದ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್ ನಲ್ಲಿ ವಿವರಿಸಲಾಗಿದೆ.
ಟರ್ಕಿಯ ಗುಪ್ತಚರ ವಿಭಾಗ ನೀಡಿದ ಸುಳಿವಿನ ಮೇರೆಗೆ ಪ್ರಾಥಮಿಕ ತನಿಖೆ ನಡೆಸಿದ ಬಳಿಕ ಸಿಯಾನ್ ನನ್ನು ಬಲೆಗೆ ಬೀಳಿಸಲು ಮತ್ತು ಡಿಇಎ ವ್ಯಾಪಕ ಜಾಲ ಬೀಸಿತ್ತು. ಪ್ರಮುಖ ಆರೋಪಿಯಾಗಿರುವ ಸಿಂಗ್ ಐಎಸ್ಐ ಬೆಂಲಿತ ಬ್ರದರ್ಸ್ ಕೀಪರ್ಸ್ ಗ್ಯಾಂಗ್ ನ ಹಿರಿಯ ಸದಸ್ಯನಾಗಿದ್ದು, ಭಾರತದ ಪಂಜಾಬ್ ಮೂಲದ, ಕೆನಡಾದಲ್ಲಿ ವಾಸವಿರುವ ತಳಹಂತದ ಕಾರ್ಯಕರ್ತರ ಜಾಲವನ್ನು ಹೊಂದಿದ್ದ ಎನ್ನಲಾಗಿದೆ.
ಈ ಗ್ಯಾಂಗ್ ಖಲಿಸ್ತಾನಕ್ಕೆ ಹಲವು ಸಂದರ್ಭಗಳಲ್ಲಿ ಬೆಂಬಲ ಒದಗಿಸಿತ್ತು ಹಾಗೂ ಏರ್ಇಂಡಿಯಾ ಬಾಂಬ್ ದಾಳಿ ಪ್ರಕರಣದ ಸೂತ್ರಧಾನ ತಲ್ವಿಂದರ್ ಸಿಂಗ್ ಪರ್ಮರ್ ಮತ್ತು ಇತರರಿಗೆ ಬೆಂಬಲ ನೀಡಿತ್ತು ಎಂದು ಮೂಲಗಳು ಹೇಳಿವೆ.







