ಅಮೆರಿಕದಲ್ಲಿ ಭಾರತ ಮೂಲದ ವ್ಯಕ್ತಿಯ ಹತ್ಯೆ; ಓರ್ವನ ಬಂಧನ

ಯೋರ್ದನೀಸ್ ಕೊಬಾಸ್ PC: TOI
ಡಲ್ಲಾಸ್: ಇಲ್ಲಿನ ಮೊಟೇಲ್ ಒಂದರಲ್ಲಿ ಭಾರತ ಮೂಲದ ಚಂದ್ರಮೌಳಿ ನಾಗಮಲ್ಲಯ್ಯ ಎಂಬವರನ್ನು ಪತ್ನಿ ಮತ್ತು ಮಗನ ಸಮ್ಮುಖದಲ್ಲೇ ಅಮಾನುಷವಾಗಿ ಶಿರಚ್ಛೇಧ ಮಾಡಿ ಹತ್ಯೆ ಮಾಡಿದ ಭಯಾನಕ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ವ್ಯಾಜ್ಯವೊಂದು ಹಿಂಸಾತ್ಮಕ ರೂಪ ಪಡೆದು ಹತ್ಯೆಯಲ್ಲಿ ಪರ್ಯವಸಾನಗೊಂಡ ಈ ಘಟನೆ ಸೆಪ್ಟೆಂಬರ್ 10ರಂದು ಡೌನ್ ಟೌನ್ ಡಲ್ಲಾಸ್ ನ ಪೂರ್ವಭಾಗದ ಸ್ಯಾಮ್ಯುಯೆಲ್ ಬೌಲ್ ವಾರ್ಡ್ ನಲ್ಲಿರುವ ಡೌನ್ ಟೌನ್ ಸ್ಯೂಟ್ಸ್ ಮೋಟೆಲ್ ನಲ್ಲಿ ನಡೆದಿದೆ. ಶಂಕಿತ ವ್ಯಕ್ತಿಯನ್ನು 37 ವರ್ಷದ ಯೋರ್ದನೀಸ್ ಕೊಬಾಸ್ ಮಾರ್ಟಿನ್ಸ್ ಎಂದು ಗುರುತಿಸಲಾಗಿದ್ದು, ಈತ ಮೋಟೆಲ್ ನ ಉದ್ಯೋಗಿ ಎಂದು ಹೇಳಲಾಗಿದೆ. ಈತನನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಲಾಗಿದೆ.
ಮುರಿದ ವಾಷ್ ಬೇಸಿನ್ ಬಳಸುವ ವಿಚಾರದಲ್ಲಿ ಉಂಟಾದ ವಾಗ್ವಾದ ಈ ಕೃತ್ಯಕ್ಕೆ ಕಾರಣವಾಯಿತು ಎಂದು ಗುರುವಾರ ಬಿಡುಗಡೆ ಮಾಡಲಾದ ಬಂಧನ ಅಫಿಡವಿಟ್ ನಲ್ಲಿ ಹೇಳಲಾಗಿದೆ. ಕೊಠಡಿ ಸ್ವಚ್ಛಗೊಳಿಸುವ ವೇಳೆ ಮಾರ್ಟಿನ್ಸ್ ಹಾಗೂ ಅವರ ಮಹಿಳಾ ಸಹೋದ್ಯೋಗಿ ಮುರಿದ ವಾಷ್ ಬೇಸಿನನ್ನು ಬಳಸಂದತೆ ನಾಗಮಲ್ಲಯ್ಯ ಸೂಚಿಸಿದ್ದು ವಾಗ್ವಾದಕ್ಕೆ ಕಾರಣವಾಯಿತು ಎಂದು ವಿವರಿಸಲಾಗಿದೆ.
ತನಗೆ ನೇರವಾಗಿ ಸೂಚನೆ ನೀಡದೇ ಭಾಷಾಂತರಕಾರ್ತಿಯಾಗಿ ಜತೆಗಿದ್ದ ಮಹಿಳಾ ಸಹೋದ್ಯೋಗಿಯನ್ನು ನಾಗಲಿಂಗಯ್ಯ ಸಂವಹನಕ್ಕೆ ಬಳಸಿದ್ದು ಮಾರ್ಟಿನ್ಸ್ ಕೋಪಕ್ಕೆ ಕಾರಣವಾಯಿತು ಎನ್ನಲಾಗಿದೆ. ಈ ಹಂತದಲ್ಲಿ ನಾಗಲಿಂಗಯ್ಯ ಮೇಲೆ ಹಲ್ಲೆ ಮಾಡಿ ಮಾರ್ಟಿನ್ಸ್ ಕೊಠಡಿಯಿಂದ ಹೊರಬರುತ್ತಿರುವುದು ವಿಡಿಯೊದಲ್ಲಿ ಕಾಣಿಸುತ್ತಿದೆ. ಬಳಿಕ ನಾಗಲಿಂಗಯ್ಯ ಅವರನ್ನು ಅಟ್ಟಾಡಿಸಿಕೊಂಡು ಹೋಗಿದ್ದು, ಮೋಟೆಲ್ ಕಚೇರಿಯಲ್ಲಿ ಹಾಜರಿದ್ದ ಪತ್ನಿ ಮತ್ತು ಮಗನ ಸಮ್ಮುಖದಲ್ಲೇ ಶಿರಚ್ಛೇಧ ಮಾಡಿದ ವಿಡಿಯೊವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.







