ಅತ್ಯಾಚಾರ ಪ್ರಕರಣ: 15 ವರ್ಷಗಳ ಬಳಿಕ ಭಾರತೀಯ ಮೂಲದ ವ್ಯಕ್ತಿಯ ಅಮೆರಿಕ ಪೌರತ್ವ ರದ್ದು

Photo Credit : NDTV
ವಾಷಿಂಗ್ಟನ್: ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿರುವ ಭಾರತೀಯ ಮೂಲದ ವ್ಯಕ್ತಿಯ ಅಮೆರಿಕ ಪೌರತ್ವವನ್ನು ರದ್ದುಗೊಳಿಸಲಾಗಿದೆ.
ಟ್ಯಾಕ್ಸಿ ಚಾಲಕನಾಗಿದ್ದ 55 ವರ್ಷದ ಗುರ್ಮೀತ್ ಸಿಂಗ್, 2011ರಲ್ಲಿ ನ್ಯೂಯಾರ್ಕ್ನಲ್ಲಿ ಮಹಿಳಾ ಪ್ರಯಾಣಿಕರೊಬ್ಬರನ್ನು ಚಾಕು ತೋರಿಸಿ ಅಪಹರಿಸಿ ಅತ್ಯಾಚಾರ ಎಸಗಿದ್ದ ಆರೋಪ ಎದುರಿಸಿದ್ದರು. ಈ ಪ್ರಕರಣದಲ್ಲಿ 2014ರಲ್ಲಿ ಗುರ್ಮೀತ್ ಸಿಂಗ್ ಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ತಿಳಿಸಿದೆ.
ಅಮೆರಿಕದ ಪೌರತ್ವ ಪಡೆಯುವ ಸಂದರ್ಭದಲ್ಲಿ ಗುರ್ಮೀತ್ ಸಿಂಗ್ ತನ್ನ ಅಪರಾಧ ಕೃತ್ಯವನ್ನು ಮರೆಮಾಚಿದ್ದ ಎಂದು ನ್ಯಾಯಾಂಗ ಇಲಾಖೆ ತಿಳಿಸಿದೆ. ಘಟನೆ ನಡೆದ ಕೆಲವೇ ತಿಂಗಳುಗಳ ಬಳಿಕ ಆತ ವಂಚನೆಯ ಮೂಲಕ ಅಮೆರಿಕದ ಪೌರತ್ವ ಪಡೆದುಕೊಂಡಿದ್ದ ಎಂದು ಇಲಾಖೆ ಹೇಳಿದೆ.
ಈ ಕುರಿತು ಪ್ರತಿಕ್ರಿಯಿಸಿದ ಅಟಾರ್ನಿ ಜನರಲ್ ಟಾಡ್ ಬ್ಲಾಂಚೆ, “ಭಾರತೀಯ ಮೂಲದ ಅತ್ಯಾಚಾರಿ ಗುರ್ಮೀತ್ ಸಿಂಗ್ ಇನ್ನು ಮುಂದೆ ಅಮೆರಿಕದ ಪ್ರಜೆಯಲ್ಲ. ಆತ ಅಪಹರಣ ಮತ್ತು ಅತ್ಯಾಚಾರದಂತಹ ಅಪರಾಧಗಳನ್ನು ಮರೆಮಾಚಿ ಪೌರತ್ವ ಪಡೆದಿದ್ದ. ಹೀಗಾಗಿ ಫೆಡರಲ್ ನ್ಯಾಯಾಲಯ ಆತನ ಪೌರತ್ವವನ್ನು ರದ್ದುಗೊಳಿಸಿದೆ” ಎಂದು ಹೇಳಿದ್ದಾರೆ.
“ವಂಚನೆಯ ಮೂಲಕ ಪಡೆದ ಪೌರತ್ವವು ಅಪರಾಧಿಗಳನ್ನು ಶಿಕ್ಷೆಯಿಂದ ರಕ್ಷಿಸುವುದಿಲ್ಲ” ಎಂದು ಟಾಡ್ ಬ್ಲಾಂಚೆ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಭಾರತ ಮೂಲದ ಗುರ್ಮೀತ್ ಸಿಂಗ್, ಫೆಬ್ರವರಿ 1992ರಲ್ಲಿ ಆರು ತಿಂಗಳ ತಾತ್ಕಾಲಿಕ ವಿಸಿಟರ್ ವೀಸಾದಲ್ಲಿ ಅಮೆರಿಕಕ್ಕೆ ತೆರಳಿದ್ದ. ವೀಸಾ ಅವಧಿ ಮುಗಿದ ಬಳಿಕವೂ ಅಕ್ರಮವಾಗಿ ಅಲ್ಲಿಯೇ ಉಳಿದಿದ್ದ ಆತ, 2000ರ ಜೂನ್ನಲ್ಲಿ ಕುಟುಂಬ ಆಧಾರಿತ ಇಮಿಗ್ರಂಟ್ ವೀಸಾ ಮೂಲಕ ಶಾಶ್ವತ ನಿವಾಸಿ (ಗ್ರೀನ್ ಕಾರ್ಡ್) ಸ್ಥಾನಮಾನ ಪಡೆದಿದ್ದ.
ಮೇ 2011ರಲ್ಲಿ ಅಮೆರಿಕದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವ ಕೆಲವೇ ವಾರಗಳ ಮೊದಲು, ಟ್ಯಾಕ್ಸಿಯಲ್ಲಿ ಮಲಗಿದ್ದ ಮಹಿಳಾ ಪ್ರಯಾಣಿಕರ ಕೊರಳಿಗೆ ಚಾಕು ಇಟ್ಟು, ಕೈಕಾಲು ಕಟ್ಟಿ ಹಾಗೂ ಕಣ್ಣಿಗೆ ಬಟ್ಟೆ ಕಟ್ಟಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ.ಬಳಿಕ ಸಂತ್ರಸ್ತೆ ಟ್ಯಾಕ್ಸಿಯಿಂದ ತಪ್ಪಿಸಿಕೊಂಡು ರಸ್ತೆಯಲ್ಲಿದ್ದವರ ಬಳಿ ರಕ್ಷಣೆ ಕೋರಿದ್ದರು.
ಈ ಅಪರಾಧವನ್ನು ಮರೆಮಾಚಿದ ಸಿಂಗ್, ಅಕ್ಟೋಬರ್ 2011ರಲ್ಲಿ ಅಮೆರಿಕದ ಪೌರತ್ವ ಪಡೆದಿದ್ದ. ನ್ಯೂಯಾರ್ಕ್ನ ಪೂರ್ವ ಜಿಲ್ಲಾ ಫೆಡರಲ್ ನ್ಯಾಯಾಲಯವು ಆಗಸ್ಟ್ 26ರಂದು ಗುರ್ಮೀತ್ ಸಿಂಗ್ನ ಅಮೆರಿಕದ ಪೌರತ್ವವನ್ನು ರದ್ದುಗೊಳಿಸಿ ತೀರ್ಪು ನೀಡಿದೆ.






