ಅಮೆರಿಕ ಸೆನೆಟ್ ಚುನಾವಣೆಗೆ ಭಾರತೀಯ ಮೂಲದ ರಜನಿ ರವೀಂದ್ರನ್ ಸ್ಪರ್ಧೆ ಘೋಷಣೆ

ರಜನಿ ರವೀಂದ್ರನ್ | Twitter/ Rejani Raveendran
ವಾಶಿಂಗ್ಟನ್: ಭಾರತೀಯ ಸಂಜಾತೆ, 40 ವರ್ಷ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ರಜನಿ ರವೀಂದ್ರನ್ ಅವರು ಅಮೆರಿಕ ರಾಜ್ಯದ ವಿಸ್ಕನ್ಸಿನ್ನಲ್ಲಿ ಸೆನೆಟ್ ಸದಸ್ಯ ಸ್ಥಾನಕ್ಕೆ ತನ್ನ ಅಭ್ಯರ್ಥನವನ್ನು ಘೋಷಿಸಿದ್ದಾರೆ. ಹಾಲಿ ಡೆಮಾಕ್ರಟಿಕ್ ಸೆನೆಟರ್ ಟ್ಯಾಮಿ ಬಾಲ್ಡ್ವಿನ್ ವಿರುದ್ಧ ಅವರು ಸ್ಪರ್ಧಿಸಲಿದ್ದಾರೆ.
ವಿಸ್ಕನ್ಸಿನ್-ಸ್ಟೀವನ್ಸ್ ಪಾಯಿಂಟ್ ಕಾಲೇಜ್ ವಿವಿಯ ರಿಪಬ್ಲಿಕನ್ ಬೆಂಬಲಿಗರ ಪೀಠದ ಅಧ್ಯಕ್ಷೆಯಾಗಿರುವ ರವೀಂದ್ರನ್ ಅವರು ಪೊರ್ಟೆಜ್ ಕೌಂಟಿಯಲ್ಲಿ ಬುಧವಾರ ನಡೆದ ಸಭೆಯೊಂದರಲ್ಲಿ 61 ವರ್ಷ ವಯಸ್ಸಿನ ಬಾಲ್ಡ್ ವಿನ್ ವಿರುದ್ಧ ತನ್ನ ಸ್ಪರ್ಧೆಯನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಸೆನೆಟರ್ ಸ್ಥಾನದ ಚುನಾವಣೆಗೆ ಇನ್ನೂ ಒಂದು ವರ್ಷವಿರುವಂತೆಯೇ ರಜನಿ ರವೀಂದ್ರನ್ ಅವರು ವಿಸ್ಕನ್ಸಿನ್ನಲ್ಲಿ ರಿಪಬ್ಲಿಕನ್ ಪಕ್ಷದಿಂದ ತನ್ನ ಅಭ್ಯರ್ಥನವನ್ನು ಘೋಷಿಸಿದ ಮೊದಲ ಸ್ಪರ್ಧಾಕಾಂಕ್ಷಿಯಾಗಿದ್ದಾರೆ. 2015ರಲ್ಲಿ ಅಮೆರಿಕ ಪೌರತ್ವವನ್ನು ಪಡೆದ ರಜನಿ ರವೀಂದ್ರನ್ ಅವರು 2017ರಿಂದೀಚೆಗೆ ಅಮೆರಿಕದಲ್ಲಿ ನೆಲೆಸಿದ್ದಾರೆ. ತಾನೋರ್ವ ಸಾಮಾನ್ಯ ವ್ಯಕ್ತಿಯಾಗಿದ್ದು ಜನಸಾಮಾನ್ಯರ ಪರಿಸ್ಥಿತಿಯನ್ನು ಚೆನ್ನಾಗಿ ಅರಿತಿದ್ದೇನೆ ಎಂದಾಕೆ ಹೇಳಿದ್ದಾರೆ.
ವಿಸ್ಕನ್ಸಿನ್ ಸೆನೆರ್ ಚುನಾವಣೆಯಲ್ಲಿ ಡೆಮಾಕ್ರಾಟಿಕ್ ಪಕ್ಷದ ಬಾಲ್ಡ್ವಿನ್ ವಿರುದ್ಧ ತಾನು ಸ್ಪರ್ಧಿಸುವುದಿಲ್ಲವೆಂದು ರಿಪಬ್ಲಿಕನ್ ನಾಯಕ ಟಾಮ್ ಟಿಫ್ಫಾನಿ ಕಳೆದವಾರ ಪ್ರಕಟಿಸಿದ್ದರು. ರಿಪಬ್ಲಿಕನ್ ಪಕ್ಷದ ಇನ್ನೋರ್ವ ಸಂಭಾವ್ಯ ಅಭ್ಯರ್ಥಿಯಾಗಿದ್ದ ಗಾಲ್ಹ್ಯಾಗರ್ ಕೂಡಾ ಸ್ಪರ್ಧೆಗೆ ನಿರಾಕರಿಸಿದ್ದಾರೆ. 2016 ಹಾಗೂ 2020ರ ಅಧ್ಯಕ್ಷೀಯ ಚುನಾವಣೆಗಳಲ್ಲಿ ತಾನು ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸಿದ್ದು, 2024ರ ಅಧ್ಯಕ್ಷೀಯ ಚುನಾವಣೆಯಲ್ಲೂ ಅವರಿಗೇ ಬೆಂಬಲ ನೀಡುವುದಾಗಿ ರಜನಿ ತಿಳಿಸಿದ್ದಾರೆ. /**/