ಒಮಾನ್ ಕರಾವಳಿ ತೀರದ ಬಳಿ ನಡೆದ ಇರಾನ್ ದಾಳಿ ಬಳಿಕ ನಾಪತ್ತೆಯಾಗಿದ್ದ ಭಾರತೀಯ ನಾವಿಕ ಮೃತ್ಯು: ದೃಢಪಡಿಸಿದ ಕುಟುಂಬದ ಸದಸ್ಯರು

ಹೇರಂಬ್ ಕರ್ಮಾಕರ್ | Photo Credit : NDTV
ಹೊಸದಿಲ್ಲಿ: ಒಮಾನ್ ಕರಾವಳಿ ತೀರದ ಬಳಿ ಜಿಎಫ್ಎಕ್ಸ್ ಗೆಲಾಕ್ಸಿ ವಾಣಿಜ್ಯ ಹಡಗಿನ ಮೇಲೆ ಇರಾನ್ ನಡೆಸಿದ ದಾಳಿ ಬಳಿಕ ನಾಪತ್ತೆಯಾಗಿದ್ದ ಭಾರತೀಯ ನಾವಿಕ ಹೇರಂಬ್ ಕರ್ಮಾಕರ್ (30) ಮೃತಪಟ್ಟಿದ್ದಾರೆ ಎಂದು ಅವರ ಮಾವ ಬುಧವಾರ ದೃಢಪಡಿಸಿದ್ದಾರೆ.
ಹಡಗನ್ನು ಕಾರ್ಯಾಚರಿಸುತ್ತಿದ್ದ ಕಂಪನಿಯು ಹೇರಂಬ್ ಕರ್ಮಾಕರ್ ಮೃತಪಟ್ಟಿದ್ದಾರೆ ಎಂದು ನಮಗೆ ಮಾಹಿತಿ ನೀಡಿದೆ ಎಂದು ಅವರ ಮಾವ ವಿವೇಕ್ ಟಂಡನ್ Reuters ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಸಿಪ್ರಸ್ ಧ್ವಜ ಹೊಂದಿದ್ದ ವಾಣಿಜ್ಯ ಹಡಗಿನ ಮೇಲೆ ರವಿವಾರ ಇರಾನ್ ನಡೆಸಿದ ದಾಳಿಯಲ್ಲಿ ಮೃತಪಟ್ಟಿರುವ ಹೇರಂಬ್ ಕರ್ಮಾಕರ್, ಆ ಹಡಗಿನ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ.
11 ಮಂದಿ ಭಾರತೀಯ ನಾವಿಕರೂ ಸೇರಿದಂತೆ ಒಟ್ಟು 24 ಮಂದಿ ಸಿಬ್ಬಂದಿಯಿದ್ದ ವಾಣಿಜ್ಯ ಹಡಗಿಗೆ ಅಪರಿಚಿತ ಕ್ಷಿಪಣಿಯೊಂದು ಅಪ್ಪಳಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದರಿ ವಾಣಿಜ್ಯ ಹಡಗಿಗೆ ತನ್ನ ಮಾರ್ಗವನ್ನು ಸರಿಪಡಿಸಿಕೊಳ್ಳುವಂತೆ ಸೂಚನೆಗಳನ್ನು ನೀಡಿದರೂ, ಆ ಹಡಗು ಅನಧಿಕೃತ ಮಾರ್ಗದಲ್ಲಿ ಸಂಚರಿಸಲು ಪ್ರಯತ್ನಿಸಿದ್ದರಿಂದ, ಅದರ ಮೇಲೆ ದಾಳಿ ನಡೆಸಲಾಯಿತು ಎಂದು ಇರಾನ್ ಹೇಳಿದೆ ಎಂದು ವರದಿಯಾಗಿದೆ.




