ಇರಾನ್-ಇಸ್ರೇಲ್ ಮಧ್ಯೆ ಉದ್ವಿಗ್ನತೆ : ಟೆಹರಾನ್ನಿಂದ ಸ್ಥಳಾಂತರಿಸುವಂತೆ ಕೋರಿದ ಭಾರತೀಯ ವಿದ್ಯಾರ್ಥಿಗಳು

Photo | REUTERS
ಟೆಹರಾನ್ : ಇರಾನ್ ಮತ್ತು ಇಸ್ರೇಲ್ ಮಧ್ಯೆ ಉದ್ವಿಗ್ನತೆ ಹಿನ್ನೆಲೆ ಟೆಹರಾನ್ನಿಂದ ತಮ್ಮನ್ನು ಸ್ಥಳಾಂತರಿಸುವಂತೆ ಭಾರತೀಯ ವಿದ್ಯಾರ್ಥಿಗಳು ಭಾರತ ಸರಕಾರಕ್ಕೆ ಕೋರಿದ್ದಾರೆ.
ʼಪ್ರಸ್ತುತ ಪರಿಸ್ಥಿತಿ ಶಾಂತವಾಗಿದೆ ಮತ್ತು ನಾವು ಸುರಕ್ಷಿತವಾಗಿದ್ದೇವೆ, ಆದರೆ ನಾವು ಭಯಭೀತರಾಗಿದ್ದೇವೆ. ಬೆಳಗಿನ ಜಾವ 3:30ರ ಸುಮಾರಿಗೆ ದಾಳಿ ಪ್ರಾರಂಭವಾಯಿತು ಮತ್ತು ಭೂಮಿ ನಡುಗಿದ ಅನುಭವವಾಯಿತು. ಇದು ಕಳವಳಕಾರಿ ಅನುಭವವಾಗಿತ್ತು ಎಂದು ಟೆಹರಾನ್ನ ಯುನಿವರ್ಸಿಟಿ ಆಫ್ ಮೆಡಿಕಲ್ ಸೈನ್ಸ್ (TUMS)ನ ಎರಡನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯಾಗಿರುವ ಕಾಶ್ಮೀರ ಮೂಲದ ತಬಿಯಾ ಝಹ್ರಾ ಹೇಳಿದ್ದಾರೆ.
ವಿಶ್ವವಿದ್ಯಾನಿಲಯದ ಅಧಿಕಾರಿಗಳು ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ. ಆದರೆ, ಸುರಕ್ಷಿತ ಸ್ಥಳದ ಬಗ್ಗೆ ಅವರು ಸ್ಪಷ್ಟನೆ ನೀಡಿಲ್ಲ. ಭದ್ರತಾ ದೃಷ್ಠಿಯಿಂದ ಮತ್ತು ಕೆಲವು ಪ್ರದೇಶಗಳಲ್ಲಿ ಇಂಟರ್ನೆಟ್ ಅಡಚಣೆಗಳಿಂದಾಗಿ ನಾವು ಭಯಭೀತರಾಗಿದ್ದೇವೆ. ಆದ್ದರಿಂದ ಸ್ಥಳಾಂತರಕ್ಕೆ ವ್ಯವಸ್ಥೆ ಮಾಡಬೇಕು ಎಂದು ಅವರು ಭಾರತ ಸರಕಾರಕ್ಕೆ ಒತ್ತಾಯಿಸಿದ್ದಾರೆ.
"ತುರ್ತು ಉದ್ದೇಶಗಳಿಗಾಗಿ ನಮ್ಮ ಸ್ಥಳೀಯ ವಿಳಾಸಗಳು ಮತ್ತು ವಿವರಗಳನ್ನು ಇಮೇಲ್ ಮಾಡಲು ರಾಯಭಾರಿ ಕಚೇರಿ ಕೇಳಿದೆ" ಎಂದು ಉತ್ತರ ಪ್ರದೇಶ ಮೂಲದ ಮತ್ತೋರ್ವ ವಿದ್ಯಾರ್ಥಿನಿ ಅಲಿಶಾ ರಿಝ್ವಿ ಹೇಳಿದರು.
ಗುರುವಾರ ತಡರಾತ್ರಿ ಇಸ್ರೇಲ್, ಇರಾನ್ನ ಮಿಲಿಟರಿ ಕೇಂದ್ರಗಳು ಮತ್ತು ನಗರಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿದೆ. ಆ ಬಳಿಕ ಇರಾನ್ ಮತ್ತು ಇಸ್ರೇಲ್ ನಡುವೆ ಉದ್ವಿಗ್ನತೆ ಉಂಟಾಗಿದೆ. ಇರಾನಿನ ಪರಮಾಣು ಮತ್ತು ಮಿಲಿಟರಿ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಇರಾನ್ ಹೇಳಿದೆ.







