ಉಕ್ರೇನ್ ನಿಂದ ಭಾರಿ ಡ್ರೋನ್ ದಾಳಿ: ರಶ್ಯಾದಲ್ಲಿ ಭಾರತೀಯ ಕಾರ್ಮಿಕ ಮೃತ್ಯು

Photo: AP/PTI
ಮಾಸ್ಕೊ: ರಶ್ಯದ ರಾಜಧಾನಿ ಮಾಸ್ಕೊ ಪ್ರಾಂತ್ಯದ ಮೇಲೆ ರವಿವಾರ ಉಕ್ರೇನ್ ನಡೆಸಿದ ಭಾರಿ ಡ್ರೋನ್ ದಾಳಿಯಲ್ಲಿ ಭಾರತೀಯ ಕಾರ್ಮಿಕನೊಬ್ಬ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ರಶ್ಯದಲ್ಲಿನ ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ.
ದಾಳಿ ನಡೆದ ಪ್ರದೇಶಕ್ಕೆ ರಾಯಭಾರಿ ಕಚೇರಿಯ ಅಧಿಕಾರಿಗಳು ಭೇಟಿ ನೀಡಿ, ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಸಂತ್ರಸ್ತರಿಗೆ ಅಗತ್ಯ ನೆರವು ಒದಗಿಸುವಂತೆ ಸಂಬಂಧಿತ ಕಂಪನಿ ಹಾಗೂ ಸ್ಥಳೀಯ ಆಡಳಿತಕ್ಕೆ ಮನವಿ ಮಾಡಲಾಗಿದೆ ಎಂದು ರಾಯಭಾರಿ ಕಚೇರಿ ಹೇಳಿದೆ.
ಈ ಕುರಿತು ಎಕ್ಸ್ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ‘ಡ್ರೋನ್ ದಾಳಿಯಲ್ಲಿ ಮೃತಪಟ್ಟವರಿಗೆ ರಾಯಭಾರಿ ಕಚೇರಿ ಸಂತಾಪ ಸೂಚಿಸುತ್ತದೆ. ಗಾಯಗೊಂಡ ಕಾರ್ಮಿಕರಿಗೆ ಅಗತ್ಯ ನೆರವು ಒದಗಿಸಬೇಕು ಎಂದು ಅವರು ಕೆಲಸ ಮಾಡುತ್ತಿದ್ದ ಕಂಪನಿ ಮತ್ತು ಸ್ಥಳೀಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ’ ಎಂದು ತಿಳಿಸಲಾಗಿದೆ.
ಆದರೆ, ಮೃತಪಟ್ಟ ಹಾಗೂ ಗಾಯಗೊಂಡ ಭಾರತೀಯ ಕಾರ್ಮಿಕರ ಗುರುತುಗಳನ್ನು ಈವರೆಗೆ ಬಹಿರಂಗಪಡಿಸಲಾಗಿಲ್ಲ. ದಾಳಿಗೆ ಸಂಬಂಧಿಸಿದಂತೆ ಸ್ಥಳೀಯ ಅಧಿಕಾರಿಗಳಿಂದಲೂ ಹೆಚ್ಚಿನ ಮಾಹಿತಿ ಬಿಡುಗಡೆಯಾಗಬೇಕಿದೆ.
ರವಿವಾರ ರಾತ್ರಿ ಉಕ್ರೇನ್, ಮಾಸ್ಕೊ ಮೇಲೆ ಇದುವರೆಗಿನ ಅತಿದೊಡ್ಡ ಡ್ರೋನ್ ದಾಳಿಯನ್ನು ನಡೆಸಿದೆ ಎಂದು ವರದಿಯಾಗಿದೆ. ದಾಳಿಯ ವೇಳೆ ಮಾಸ್ಕೊ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೈರನ್ಗಳ ಶಬ್ದ, ಸ್ಫೋಟಗಳು ಹಾಗೂ ಅವಶೇಷಗಳು ಪತನಗೊಳ್ಳುತ್ತಿರುವ ದೃಶ್ಯಗಳು ಕಂಡುಬಂದಿವೆ.
ಕಳೆದ 24 ಗಂಟೆಗಳಲ್ಲಿ ಉಕ್ರೇನ್ನ 1,000ಕ್ಕೂ ಹೆಚ್ಚು ಡ್ರೋನ್ ಗಳನ್ನು ಹೊಡೆದುರುಳಿಸಲಾಗಿದೆ ಎಂದು ರಶ್ಯದ ರಕ್ಷಣಾ ಸಚಿವಾಲಯ ತಿಳಿಸಿದೆ. ಮಧ್ಯರಾತ್ರಿ ವೇಳೆಗೆ ಮಾಸ್ಕೊದತ್ತ ಬಂದ ಸುಮಾರು 81 ಡ್ರೋನ್ಗಳನ್ನು ವಾಯು ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ ಎಂದು ಮಾಸ್ಕೊ ಮೇಯರ್ ಸೆರ್ಗೈ ಸೊಬಿನಿನ್ ಹೇಳಿದ್ದಾರೆ.
ಈ ದಾಳಿಯಿಂದ ಹಲವು ಪ್ರದೇಶಗಳ ವಸತಿ ಕಟ್ಟಡಗಳು ಹಾಗೂ ಮೂಲಸೌಕರ್ಯಗಳಿಗೆ ಹಾನಿಯಾಗಿದೆ. ಮಾಸ್ಕೊ ಪ್ರಾಂತ್ಯದಲ್ಲಿ ಮೂವರು ಸೇರಿದಂತೆ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಕ್ರೇನ್ ಗಡಿಭಾಗದ ರಶ್ಯದ ಬೆಲ್ಗೊರೊಡ್ ಪ್ರಾಂತ್ಯದಲ್ಲಿಯೂ ಮತ್ತೊಬ್ಬರು ಮೃತಪಟ್ಟ ವರದಿಯಾಗಿದೆ.






