ಮೋದಿ ಟ್ರಂಪ್ಗೆ ಕರೆ ಮಾಡದ ಕಾರಣ ಭಾರತ-ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ಯಶಸ್ವಿಯಾಗಿಲ್ಲ: ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೇಳಿಕೆ

File Photo: PTI
ವಾಷಿಂಗ್ಟನ್: ಪ್ರಸ್ತಾವಿತ ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಯಶಸ್ವಿಯಾಗದಿರಲು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನೇರವಾಗಿ ಫೋನ್ ಮೂಲಕ ಮಾತನಾಡದಿರುವುದು ಕಾರಣ ಎಂದು ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಹೇಳಿದ್ದಾರೆ.
ಗುರುವಾರ ಆಲ್ ಇನ್ ಪಾಡ್ಕಾಸ್ಟ್ನಲ್ಲಿ ಮಾತನಾಡಿದ ಹೊವಾರ್ಡ್ ಲುಟ್ನಿಕ್, ಟ್ರಂಪ್ ಸರಕಾರ ವ್ಯಾಪಾರ ಮಾತುಕತೆಗಳಿಗೆ ಕಟ್ಟುನಿಟ್ಟಾದ, ನಿಗದಿತ ವಿಧಾನವನ್ನು ಅನುಸರಿಸುತ್ತಿತ್ತು ಎಂದು ಹೇಳಿದರು.
ಲುಟ್ನಿಕ್ ಅವರ ಪ್ರಕಾರ, ಮಾತುಕತೆಗಳನ್ನು ಮುಕ್ತಾಯಗೊಳಿಸಲು ಭಾರತಕ್ಕೆ ಮೂರು ಶುಕ್ರವಾರಗಳ ಸೀಮಿತ ಸಮಯವಿದೆ ಎಂದು ಹೇಳಲಾಗಿತ್ತು. ಅಧಿಕಾರಿಗಳು ಹೆಚ್ಚಾಗಿ ಚೌಕಟ್ಟಿನಲ್ಲಿ ಮಾತುಕತೆ ನಡೆಸಿದ್ದರೂ, ಒಪ್ಪಂದವನ್ನು ಮುಕ್ತಾಯಗೊಳಿಸಲು ಪ್ರಧಾನಿಯ ನೇರ ಹಸ್ತಕ್ಷೇಪದ ಅಗತ್ಯವಿದೆ ಎಂದು ಲುಟ್ನಿಕ್ ಹೇಳಿದರು.
ಮೋದಿ ಅವರು ಅಧ್ಯಕ್ಷರಿಗೆ ಕರೆ ಮಾಡಬೇಕು. ಎಲ್ಲವೂ ಸಿದ್ಧವಾಗಿದೆ ಎಂದು ನಾನು ಹೇಳಿದೆ. ಭಾರತಕ್ಕೆ ಅಂತಹ ಕರೆ ಮಾಡುವುದು ಅನಾನುಕೂಲವಾಗಿತ್ತು. ಆದ್ದರಿಂದ ಮೋದಿ ಕರೆ ಮಾಡಲಿಲ್ಲ.ಗಡುವು ಮುಗಿದ ನಂತರ ಅಮೆರಿಕ ಇಂಡೋನೇಷ್ಯಾ, ಫಿಲಿಪೈನ್ಸ್ ಮತ್ತು ವಿಯೆಟ್ನಾಂ ಜೊತೆ ವ್ಯಾಪಾರ ಒಪ್ಪಂದ ಘೋಷಿಸಿತು. ಆದರೆ ಭಾರತ ಆ ದೇಶಗಳಿಗಿಂತ ಮೊದಲು ತನ್ನ ಒಪ್ಪಂದವನ್ನು ಅಂತಿಮಗೊಳಿಸುತ್ತದೆ ಎಂಬ ನಿರೀಕ್ಷೆ ಇತ್ತು ಎಂದು ಹೊವಾರ್ಡ್ ಲುಟ್ನಿಕ್ ಹೇಳಿದರು.





