ದೋಹಾದಲ್ಲಿ ಅಮೆರಿಕ-ಇರಾನ್ ನಡುವೆ ಪರೋಕ್ಷ ತಾಂತ್ರಿಕ ಮಾತುಕತೆ ಪ್ರಗತಿಯಲ್ಲಿ: ವರದಿ

ಸಾಂದರ್ಭಿಕ ಚಿತ್ರ(AI)
ದೋಹಾ, ಜು.1: ಅಮೆರಿಕ ಮತ್ತು ಇರಾನ್ ನಡುವೆ ಪರೋಕ್ಷ ತಾಂತ್ರಿಕ ಮಾತುಕತೆಗಳು ದೋಹಾದಲ್ಲಿ ನಡೆಯುತ್ತಿದ್ದು, ಖತರ್ ಮತ್ತು ಪಾಕಿಸ್ತಾನಗಳು ಮಧ್ಯಸ್ಥಗಾರರಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮಾತುಕತೆಗಳು ಕಳೆದ ತಿಂಗಳು ಸಹಿ ಮಾಡಿದ 14 ಅಂಶಗಳ ಮಧ್ಯಂತರ ಒಪ್ಪಂದವನ್ನು ಆಧರಿಸಿದೆ. ಇದು ಫೆಬ್ರವರಿಯಲ್ಲಿ ಆರಂಭವಾದ ಯುದ್ಧವನ್ನು ನಿಲ್ಲಿಸಲು ಮತ್ತು ಹಾರ್ಮುಝ್ ಜಲಸಂಧಿಯನ್ನು ಪುನಃ ತೆರೆಯಲು ಉದ್ದೇಶಿಸಿದೆ. ಜೊತೆಗೆ, ಶಾಶ್ವತ ಮಾತುಕತೆಗಾಗಿ 60 ದಿನಗಳ ಶಾಂತಿ ಒಪ್ಪಂದವನ್ನು ಸ್ಥಾಪಿಸುತ್ತದೆ.
ತಾಂತ್ರಿಕ ಅಧಿವೇಶನಗಳಿಗೆ ಅಗತ್ಯವಿರುವ ಸಿದ್ಧತೆಗಳನ್ನು ಮಾಡಿಕೊಳ್ಳಲು ಅಮೆರಿಕದ ಪ್ರತಿನಿಧಿಗಳಾದ ಸ್ಟೀವ್ ವಿಟ್ಕಾಫ್ ಮತ್ತು ಜ್ಯಾರೆಡ್ ಕುಶ್ನರ್ ಅವರು ಮಂಗಳವಾರ ಖತರ್ ಪ್ರಧಾನಿಯನ್ನು ಭೇಟಿಯಾಗಿದ್ದರು. ಅಮೆರಿಕದೊಂದಿಗಿನ ಮಾತುಕತೆಗಳ ಕುರಿತು ಚರ್ಚಿಸಲು ತಾವು ಖತರ್ ಮಧ್ಯಸ್ಥಗಾರರನ್ನು ಭೇಟಿಯಾಗುವುದಾಗಿ ಇರಾನ್ ತಿಳಿಸಿದ್ದು ಅಮೆರಿಕದ ಪ್ರತಿನಿಧಿಗಳೊಂದಿಗೆ ನೇರ ಮಾತುಕತೆ ನಡೆಸುವುದಿಲ್ಲ ಎಂದು ಒತ್ತಿಹೇಳಿದೆ. ಅಮೆರಿಕ-ಇರಾನ್ ನಡುವೆ ಯಾವುದೇ ಉನ್ನತ ಮಟ್ಟದ ಸಭೆಗಳು ಅಥವಾ ನೇರ ಮಾತುಕತೆಗಳನ್ನು ಯೋಜಿಸಲಾಗಿಲ್ಲ. ಅಮೆರಿಕದ ಪ್ರತಿನಿಧಿಗಳು ಇರಾನ್ ಅಧಿಕಾರಿಗಳನ್ನು ನೇರವಾಗಿ ಭೇಟಿಯಾಗುವುದಿಲ್ಲ ಎಂದು ಖತರ್ ಕೂಡ ಸ್ಪಷ್ಟಪಡಿಸಿದೆ.






