ಇಂಡೋನೇಶ್ಯಾ: ಪ್ರವಾಹ, ಭೂಕುಸಿತಕ್ಕೆ ಒಬ್ಬ ಬಲಿ; 7 ಮಂದಿ ನಾಪತ್ತೆ

ಸಾಂದರ್ಭಿಕ ಚಿತ್ರ | PTI
ಜಕಾರ್ತ: ಇಂಡೋನೇಶ್ಯಾದ ಜಾವಾ ದ್ವೀಪದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಪ್ರವಾಹ ಹಾಗೂ ಭೂಕುಸಿತ ಸಂಭವಿಸಿದ್ದು ಕನಿಷ್ ಒಬ್ಬ ಸಾವನ್ನಪ್ಪಿದ್ದಾನೆ. 18ಕ್ಕೂ ಅಧಿಕ ನಗರಗಳು ಜಲಾವೃತಗೊಂಡಿದ್ದು 7 ಮಂದಿ ನಾಪತ್ತೆಯಾಗಿರುವುದಾಗಿ ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.
ಈ ವಾರದ ಆರಂಭದಲ್ಲಿ ರಾಜಧಾನಿ ಜಕಾರ್ತ ಹಾಗೂ ಸುತ್ತಮುತ್ತಲಿನ ನಗರಗಳಲ್ಲಿ ಧಾರಾಕಾರ ಮಳೆಯಾಗಿದ್ದು ಸಾವಿರಾರು ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿತ್ತು. ಗುರುವಾರದಿಂದ ಪಶ್ಚಿಮ ಜಾವಾ ಪ್ರಾಂತದಲ್ಲಿ ಮಳೆ ಸುರಿಯುತ್ತಿದ್ದು ಸುಕಬೂಮಿ ಜಿಲ್ಲೆಯಲ್ಲಿ ಹಲವು ಮನೆಗಳಿಗೆ ಹಾನಿಯಾಗಿದೆ ಮತ್ತು ಶಾಲೆ, ಆಸ್ಪತ್ರೆಗಳ ಸಹಿತ ನೂರಾರು ಸಾರ್ವಜನಿಕ ಸೌಲಭ್ಯಗಳು ಪ್ರವಾಹದ ಹೊಡೆತಕ್ಕೆ ಸಿಲುಕಿದೆ. ಪಶ್ಚಿಮ ಜಾವಾ ಪ್ರಾಂತದಲ್ಲಿ ಸಂಭವಿಸಿದ ಪ್ರತ್ಯೇಕ ದುರಂತದಲ್ಲಿ ಒಂದು ಮಗು ಸಾವನ್ನಪ್ಪಿದ್ದು 7 ಮಂದಿ ನಾಪತ್ತೆಯಾಗಿದ್ದಾರೆ. ಕನಿಷ್ಟ 200 ಮಂದಿಯನ್ನು ಎತ್ತರದ ಪ್ರದೇಶಗಳಿಗೆ ಸ್ಥಳಾಂತರಿಸಿರುವುದಾಗಿ ಸ್ಥಳೀಯ ವಿಪತ್ತು ನಿರ್ವಹಣಾ ಏಜೆನ್ಸಿಯ ಅಧಿಕಾರಿಗಳು ಹೇಳಿದ್ದಾರೆ.





