Indonesia | 11 ಮಂದಿ ಪ್ರಯಾಣಿಕರಿದ್ದ ವಿಮಾನ ನಾಪತ್ತೆ

Representative Image (PTI)
ಜಕಾರ್ತಾ: ಶನಿವಾರ 11 ಮಂದಿ ಪ್ರಯಾಣಿಕರಿದ್ದ ಪ್ರಾಂತೀಯ ಪ್ರಯಾಣಿಕರ ವಿಮಾನವೊಂದು ಗುಡ್ಡಗಾಡು ಪ್ರದೇಶವಾದ ದಕ್ಷಿಣ ಸುಲವೇಸಿಯನ್ನು ಸಮೀಪಿಸುವ ವೇಳೆ ವಾಯು ನಿಯಂತ್ರಣ ಕೊಠಡಿಯೊಂದಿಗೆ ಸಂಪರ್ಕ ಕಳೆದುಕೊಂಡಿದೆ. ವಿಮಾನದ ಪತ್ತೆಗಾಗಿ ವ್ಯಾಪಕ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ ಎಂದು ಇಂಡೋನೇಶ್ಯಾ ಪ್ರಾಧಿಕಾರಗಳು ತಿಳಿಸಿವೆ.
ಇಂಡೋನೇಶ್ಯಾ ಏರ್ ಟ್ರಾನ್ಸ್ಪೋರ್ಟ್ ಕಾರ್ಯಾಚರಿಸುತ್ತಿದ್ದ ಟರ್ಬೊಪ್ರಾಪ್ ಎಟಿಆರ್ 42-500 ವಿಮಾನವು ಯೋಗ್ಯಕರ್ತದಿಂದ ದಕ್ಷಿಣ ಸುಲವೇಸಿಯ ರಾಜಧಾನಿಯತ್ತ ಪ್ರಯಾಣಿಸುತ್ತಿದ್ದಾಗ ರಡಾರ್ ಸಂಪರ್ಕ ಕಡಿದುಕೊಂಡಿತು ಎಂದು ಸಾರಿಗೆ ಸಚಿವಾಲಯದ ವಕ್ತಾರೆ ಎಂಡಾಹ್ ಪುರ್ನಾಮ ಸಾರಿ ತಿಳಿಸಿದ್ದಾರೆ.
ಮಧ್ಯಾಹ್ನ 1.17ರ ವೇಳೆಗೆ ಈ ವಿಮಾನವು ಬುಲುಸರೌಂಗ್ ರಾಷ್ಟ್ರೀಯ ಉದ್ಯಾನವನದ ಸಮೀಪದ ಗುಡ್ಡಗಾಡು ಪ್ರದೇಶವಾದ ಮಾರೋಸ್ ಜಿಲ್ಲೆಯ ಲಿಯಾಂಗ್-ಲಿಯಾಂಗ್ ಪ್ರದೇಶದ ಮೇಲೆ ಕೊನೆಯದಾಗಿ ಕಾಣಿಸಿಕೊಂಡಿತ್ತು ಎಂದು ಅವರು ಹೇಳಿದ್ದಾರೆ.
“ವಾಯುಪಡೆ ಹೆಲಿಕಾಪ್ಟರ್ಗಳು, ಡ್ರೋನ್ಗಳು ಹಾಗೂ ಭೂಪಡೆಗಳ ನೆರವಿನಿಂದ ವಿವಿಧ ಶೋಧ ಮತ್ತು ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ. ತನ್ನ ದಿಕ್ಕಿನ ಗುರಿಯನ್ನು ಸರಿಪಡಿಸುವಂತೆ ವಾಯು ನಿಯಂತ್ರಣ ಕೊಠಡಿಗೆ ಕೊನೆಯ ನಿರ್ದೇಶನಗಳನ್ನು ನೀಡಿದ ಬಳಿಕ ವಿಮಾನದ ರೇಡಿಯೊ ಸಂಪರ್ಕ ಕಡಿದುಹೋಯಿತು. ಈ ಹಿನ್ನೆಲೆಯಲ್ಲಿ ವಾಯು ನಿಯಂತ್ರಕರು ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ” ಎಂದು ಅವರು ತಿಳಿಸಿದ್ದಾರೆ.







