ಚೀನಾದಿಂದ ಬಾಂಗ್ಲಾದೇಶಕ್ಕೆ 405 ಟನ್ ಕ್ಷಿಪಣಿ ರಾಸಾಯನಿಕ ಸಾಗಣೆ: ಹಡಗು ವಶಕ್ಕೆ ಪಡೆದ ಇಂಡೋನೇಷ್ಯಾ

Image: Vessel Finder
ಜಕಾರ್ತ: ಚೀನಾದಿಂದ ಬಾಂಗ್ಲಾದೇಶಕ್ಕೆ ತೆರಳುತ್ತಿದ್ದ ಸರಕು ಹಡಗೊಂದನ್ನು ಇಂಡೋನೇಷ್ಯಾ ನೌಕಾಪಡೆಯು ವಶಪಡಿಸಿಕೊಂಡಿದ್ದು, ಅದರಲ್ಲಿ 405 ಟನ್ ಸೋಡಿಯಂ ಪರ್ಕ್ಲೋರೇಟ್ ಪತ್ತೆಯಾಗಿದೆ. ರಾಕೆಟ್ ಮತ್ತು ಕ್ಷಿಪಣಿ ಪ್ರೊಪೆಲ್ಲಂಟ್ಗಳ ತಯಾರಿಕೆಯಲ್ಲಿ ಬಳಸುವ ಈ ರಾಸಾಯನಿಕದ ಸಾಗಣೆ, ಅದರ ಮಾಲೀಕತ್ವ ಮತ್ತು ಉದ್ದೇಶಿತ ಬಳಕೆಯ ಬಗ್ಗೆ ಕಳವಳ ಮೂಡಿಸಿದೆ.
ಕೊಮೊರೊಸ್ ಧ್ವಜ ಹೊಂದಿದ್ದ ಎಂವಿ ಸ್ಟಾರ್ ಲೈನ್ ಹಡಗು ಚೀನಾದಿಂದ ಬಾಂಗ್ಲಾದೇಶದ ಮೊಂಗ್ಲಾ ಬಂದರಿಗೆ ತೆರಳುತ್ತಿತ್ತು ಎಂದು ವರದಿಯಾಗಿದೆ. ನ. 7ರಂದು ಉತ್ತರ ಸುಮಾತ್ರಾದ ಬೆಲಾವನ್ ಬಳಿಯ ಇಂಡೋನೇಷ್ಯಾ ಜಲಪ್ರದೇಶದಲ್ಲಿ ಇದನ್ನು ತಡೆಹಿಡಿಯಲಾಯಿತು. ಹಡಗಿನ ಚಲನವಲನ ಅನುಮಾನಾಸ್ಪದವಾಗಿದ್ದ ಹಿನ್ನೆಲೆಯಲ್ಲಿ ಹಾಗೂ ಅದು ನೌಕಾಪಡೆಯ ರೇಡಿಯೊ ಸಂಪರ್ಕಕ್ಕೆ ಪ್ರತಿಕ್ರಿಯಿಸದ ಕಾರಣ ಗಸ್ತು ಪಡೆ ಅದನ್ನು ತಡೆದು ತಪಾಸಣೆ ನಡೆಸಿತು.
ಹಡಗು ಇಂಧನ ತುಂಬಲು ಬೆಲಾವನ್ ಬಂದರಿಗೆ ಬರುತ್ತಿರುವುದಾಗಿ ಹೇಳಿಕೊಂಡಿದ್ದರೂ, ನೌಕಾಪಡೆಯ ಅಧಿಕಾರಿಗಳು ಇದು ತಮ್ಮ ಹಿಂಬಾಲಿಸುವಿಕೆಯಿಂದ ತಪ್ಪಿಸಿಕೊಳ್ಳಲು ಮಾಡಿದ ನೆಪವಾಗಿತ್ತು ಎಂದು ಆರೋಪಿಸಿದ್ದಾರೆ. ಹಡಗು ನಿಗದಿತ ಮಾರ್ಗದಿಂದ ಹೊರತಾಗಿ ಸಂಚರಿಸುತ್ತಿದ್ದುದೂ ಅನುಮಾನಕ್ಕೆ ಕಾರಣವಾಗಿತ್ತು.
ತಪಾಸಣೆಯ ವೇಳೆ, ಹಡಗಿನಲ್ಲಿದ್ದ 36 ಕಂಟೇನರ್ ಗಳ ಪೈಕಿ 15 ಕಂಟೇನರ್ ಗಳಲ್ಲಿ ಒಟ್ಟು 405 ಟನ್ ಸೋಡಿಯಂ ಪರ್ಕ್ಲೋರೇಟ್ ಪತ್ತೆಯಾಗಿದೆ. ಇದರ ಜೊತೆಗೆ, ಖಾಲಿ 4G LTE SIM ಕಾರ್ಡ್ಗಳನ್ನು ಒಳಗೊಂಡ 54 ಪ್ಯಾಲೆಟ್ ಗಳನ್ನೂ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ಹಡಗಿನ ನೋಂದಣಿ ಸ್ಥಿತಿ ಅಮಾನತುಗೊಂಡಿರುವುದು ಹಾಗೂ ಸಾಗಣೆ ದಾಖಲೆಗಳಲ್ಲಿ ವ್ಯತ್ಯಾಸಗಳಿರುವುದು ಕೂಡ ಪತ್ತೆಯಾಗಿದೆ. ರಾಸಾಯನಿಕ ಸಾಗಣೆಗೆ ಸಂಬಂಧಿಸಿದ ನಿಯಮಗಳನ್ನು ಪಾಲಿಸಲಾಗಿದೆಯೇ ಮತ್ತು ಸರಕಿನ ನಿಜವಾದ ಮಾಲೀಕರು ಯಾರು ಎಂಬುದರ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಸೋಡಿಯಂ ಪರ್ಕ್ಲೋರೇಟ್ ಕೈಗಾರಿಕಾ ಬಳಕೆಗಳಲ್ಲಿ ಬಳಸುವ ಶಕ್ತಿಶಾಲಿ ಆಕ್ಸಿಡೈಸರ್ ಆಗಿದ್ದು, ರಾಕೆಟ್ ಮತ್ತು ಕ್ಷಿಪಣಿ ಪ್ರೊಪೆಲ್ಲಂಟ್ ಗಳ ತಯಾರಿಕೆಯಲ್ಲೂ ಬಳಸಲಾಗುತ್ತದೆ.






