Indonesia | ಶೈಕ್ಷಣಿಕ ಅರ್ಹತೆ ವಿವಾದ: ಉಪಾಧ್ಯಕ್ಷ ಗಿಬ್ರಾನ್ ರಾಜೀನಾಮೆ
ಪ್ರಬೋವೊ–ಜೋಕೋವಿ ರಾಜಕೀಯ ಮೈತ್ರಿಯಲ್ಲಿ ಬಿರುಕು

Photo CRedit: X/@gibran_tweet
ಜಕಾರ್ತ:ಇಂಡೋನೇಷ್ಯಾದ ಉಪಾಧ್ಯಕ್ಷ ಗಿಬ್ರಾನ್ ರಾಕಾಬುಮಿಂಗ್ ರಾಕಾ ಅವರು ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಮತ್ತು ಮಾಜಿ ಅಧ್ಯಕ್ಷ ಜೋಕೊ ವಿಡೋಡೊ (ಜೋಕೋವಿ) ನಡುವಿನ ರಾಜಕೀಯ ಭಿನ್ನಾಭಿಪ್ರಾಯಗಳು ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ. ಪ್ರಬೋವೊ ಅವರನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮೈತ್ರಿಕೂಟದ ಒಗ್ಗಟ್ಟಿನ ಬಗ್ಗೆಯೂ ಪ್ರಶ್ನೆಗಳು ಮೂಡಿವೆ ಎಂದು BBC ವರದಿ ಮಾಡಿದೆ.
2024ರ ಚುನಾವಣಾ ಪ್ರಚಾರದ ವೇಳೆ ಗಿಬ್ರಾನ್ ಬಳಸಿದ್ದ ಪ್ರೌಢಶಾಲಾ ಶೈಕ್ಷಣಿಕ ದಾಖಲೆ ಅಸಿಂಧು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ರಾಜೀನಾಮೆ ಪತ್ರ ಸಲ್ಲಿಸಲಾಗಿದೆ. ಬುಧವಾರ ಅಧ್ಯಕ್ಷ ಪ್ರಬೋವೊ ಅವರಿಗೆ ಪತ್ರವನ್ನು ನೇರವಾಗಿ ಸಲ್ಲಿಸಿರುವುದಾಗಿ ಗಿಬ್ರಾನ್ ಅವರ ಸಹಾಯಕ ಬುಡಿ ಅರಿ BBCಗೆ ತಿಳಿಸಿದ್ದಾರೆ. ಆದರೆ, ರಾಜೀನಾಮೆ ಅಂಗೀಕಾರವಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
ನ್ಯಾಯಾಲಯದ ತೀರ್ಪಿನ ಬಳಿಕ 100ಕ್ಕೂ ಹೆಚ್ಚು ಸಂಸದರು ಗಿಬ್ರಾನ್ ವಿರುದ್ಧ ಸಂಸದೀಯ ಕ್ರಮ ಕೈಗೊಳ್ಳಲು ಬೆಂಬಲ ಸೂಚಿಸಿದ್ದರು. ಈ ಕ್ರಮವು ಅವರನ್ನು ಉಪಾಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸುವ ಪ್ರಕ್ರಿಯೆಗೆ ದಾರಿ ಮಾಡಿಕೊಡುವ ಸಾಧ್ಯತೆಯಿತ್ತು.
ಉಪಾಧ್ಯಕ್ಷರಾಗಲು ಅಗತ್ಯವಾದ ಹಿರಿಯ ಪ್ರೌಢಶಾಲಾ ಶಿಕ್ಷಣ ಅಥವಾ ಅದಕ್ಕೆ ಸಮಾನವಾದ ಶಿಕ್ಷಣವನ್ನು ಗಿಬ್ರಾನ್ ಪೂರ್ಣಗೊಳಿಸಿದ್ದಾರೆಯೇ ಎಂಬುದು ಬಹುಕಾಲದಿಂದ ವಿವಾದಕ್ಕೆ ಕಾರಣವಾಗಿದೆ. ಸಿಂಗಾಪುರ ಮತ್ತು ಆಸ್ಟ್ರೇಲಿಯಾದಲ್ಲಿ ಶಿಕ್ಷಣ ಪಡೆದಿರುವ ಅವರು, ತಮ್ಮ ಅರ್ಹತೆಯನ್ನು ಸಾಬೀತುಪಡಿಸಲು ಇಂಡೋನೇಷ್ಯಾದ 'ಸಮಾನತಾ ಪ್ರಮಾಣಪತ್ರ' ಬಳಸಿದ್ದರು.
ಆದರೆ, ಹಿರಿಯ ಪ್ರೌಢಶಾಲಾ ಶಿಕ್ಷಣ ಅಥವಾ ಅದಕ್ಕೆ ಸಮಾನವಾದ ಅರ್ಹತೆಯನ್ನು ಸಾಬೀತುಪಡಿಸುವ ಯಾವುದೇ ವಿದೇಶಿ ಡಿಪ್ಲೊಮಾ ಅಥವಾ ಪ್ರಮಾಣಪತ್ರ ಗಿಬ್ರಾನ್ ಬಳಿ ಇರುವುದಕ್ಕೆ ಸಾಕ್ಷ್ಯ ಸಿಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಕ್ಟೋಬರ್ ಆರಂಭದಲ್ಲಿ ಸಾಂವಿಧಾನಿಕ ನ್ಯಾಯಾಲಯ ನೀಡಿದ್ದ ತೀರ್ಪಿನಲ್ಲೂ ಇದೇ ಅಭಿಪ್ರಾಯ ವ್ಯಕ್ತವಾಗಿತ್ತು.
ವಿಶ್ವವಿದ್ಯಾಲಯದ ಶಿಕ್ಷಣ ಪಡೆದಿರುವುದೇ ಹಿರಿಯ ಪ್ರೌಢಶಾಲಾ ಶಿಕ್ಷಣ ಪೂರ್ಣಗೊಳಿಸಿರುವುದಕ್ಕೆ ಸಾಕು ಎಂಬುದು ಗಿಬ್ರಾನ್ ಅವರ ವಾದ. ಮಂಗಳವಾರ ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಶ್ನಿಸಲು ಅವಕಾಶ ನೀಡುವಂತೆ ಹಾಗೂ ತಮ್ಮ ಶೈಕ್ಷಣಿಕ ಅರ್ಹತೆಯ ಸಿಂಧುತ್ವ ಸಾಬೀತುಪಡಿಸಲು ಅವಕಾಶ ಕಲ್ಪಿಸುವಂತೆ ಅವರು ಮನವಿ ಮಾಡಿದ್ದಾರೆ ಎಂದು ರಾಜ್ಯ ಕಾರ್ಯದರ್ಶಿ ಪ್ರಸೆತ್ಯೋ ಹದಿ ತಿಳಿಸಿದ್ದಾರೆ.
2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಬೋವೊ ಅವರ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಗಿಬ್ರಾನ್ ಕಣಕ್ಕಿಳಿದಿದ್ದರು. ಅವರ ತಂದೆ ಜೋಕೋವಿ ಮತ್ತು ಹಿಂದೆ ರಾಜಕೀಯ ಪ್ರತಿಸ್ಪರ್ಧಿಯಾಗಿದ್ದ ಪ್ರಬೋವೊ ನಡುವೆ ಏರ್ಪಟ್ಟ ಮೈತ್ರಿಯ ಭಾಗವಾಗಿ ಈ ಆಯ್ಕೆ ನಡೆದಿತ್ತು.
ಆಗ ಗಿಬ್ರಾನ್ ಗೆ 36 ವರ್ಷ ವಯಸ್ಸಾಗಿತ್ತು. ಅಭ್ಯರ್ಥಿಗಳಿಗೆ ನಿಗದಿಪಡಿಸಿದ್ದ 40 ವರ್ಷಗಳ ಕನಿಷ್ಠ ವಯೋಮಿತಿಯಿಂದ ಸಾಂವಿಧಾನಿಕ ನ್ಯಾಯಾಲಯದ ವಿವಾದಾತ್ಮಕ ತೀರ್ಪಿನ ಮೂಲಕ ವಿನಾಯಿತಿ ದೊರೆತ ಬಳಿಕ ಅವರು ಸ್ಪರ್ಧಿಸಲು ಅರ್ಹತೆ ಪಡೆದಿದ್ದರು.
ಅಧ್ಯಕ್ಷರಾದ ಬಳಿಕ ಜೋಕೋವಿ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ಹೊಸ ರಾಜಧಾನಿ 'ನುಸಂತಾರಾ' ನಿರ್ಮಾಣಕ್ಕೆ ಪ್ರಬೋವೊ ಹೆಚ್ಚಿನ ಆದ್ಯತೆ ನೀಡಿಲ್ಲ. ಬದಲಿಗೆ, ಶಾಲಾ ಮಕ್ಕಳಿಗೆ ಉಚಿತ ಊಟ ಒದಗಿಸುವ ತಮ್ಮ ಪ್ರಮುಖ ಕಾರ್ಯಕ್ರಮಕ್ಕೆ ಸರ್ಕಾರದ ಸಂಪನ್ಮೂಲಗಳನ್ನು ಕೇಂದ್ರೀಕರಿಸಿದ್ದಾರೆ.
ಕಳೆದ ವಾರ ಅಧ್ಯಕ್ಷರ ಮುಖ್ಯ ಸಿಬ್ಬಂದಿ ಲಿಸ್ಟ್ಯೋ ಸಿಗಿತ್ ಪ್ರಬೋವೊ ಅವರನ್ನು ಅಧ್ಯಕ್ಷರ ಮಾತುಕತೆಗಳನ್ನು ಕದ್ದಾಲಿಕೆ ಮಾಡಿದ ಶಂಕೆಯ ಮೇರೆಗೆ ಅಧಿಕಾರಿಗಳು ಬಂಧಿಸಿದ್ದರು. ಮರುದಿನವೇ ಪ್ರಬೋವೊ ಅವರನ್ನು ಹುದ್ದೆಯಿಂದ ವಜಾಗೊಳಿಸಿದರು. ರಾಷ್ಟ್ರೀಯ ಪೊಲೀಸ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಲಿಸ್ಟ್ಯೋ, ಜೋಕೋವಿ ಅವರ ದೀರ್ಘಕಾಲದ ಆಪ್ತರಾಗಿದ್ದಾರೆ. ಈ ಬೆಳವಣಿಗೆಯನ್ನೂ ಮೈತ್ರಿಕೂಟದಲ್ಲಿನ ಬಿರುಕುಗಳ ಸೂಚನೆ ಎಂದು ವಿಶ್ಲೇಷಿಸಲಾಗಿದೆ.
ಇದೇ ವೇಳೆ, ಸೋಮವಾರ ಪ್ರಬೋವೊ ಸಂಪುಟದ ಮೂವರು ಸದಸ್ಯರು ಜೋಕೋವಿ ಅವರ ಕಿರಿಯ ಪುತ್ರ ಕೇಸಾಂಗ್ ಪಾಂಗಾರೆಪ್ ನೇತೃತ್ವದ ಪಕ್ಷದ ಸದಸ್ಯತ್ವಕ್ಕೆ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ. ಪ್ರಬೋವೊ ಆಡಳಿತದಲ್ಲಿ ತಮ್ಮ ಜವಾಬ್ದಾರಿಗಳ ಮೇಲೆ ಗಮನ ಕೇಂದ್ರೀಕರಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ಪ್ರಬೋವೊ ಆಡಳಿತವು ಹಲವು ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಶಾಲಾ ಮಕ್ಕಳಿಗೆ ಉಚಿತ ಊಟ ಒದಗಿಸುವ ಪ್ರಮುಖ ಕಾರ್ಯಕ್ರಮ ನಿಧಿಯ ಕೊರತೆಯಿಂದ ಸಂಕಷ್ಟದಲ್ಲಿದೆ. ಇಂಡೋನೇಷ್ಯಾದ ಕೆಲವು ಭಾಗಗಳಲ್ಲಿ ಕಳೆದ ಒಂದು ದಶಕದಲ್ಲೇ ಅತ್ಯಂತ ಭೀಕರವಾದ ಕಾಡ್ಗಿಚ್ಚುಗಳು ಸಂಭವಿಸಿವೆ. ಷೇರು ಮಾರುಕಟ್ಟೆಯಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂಬ ಆರೋಪಗಳ ನಡುವೆಯೂ ರಾಷ್ಟ್ರೀಯ ಷೇರು ಮಾರುಕಟ್ಟೆ ಬಿಕ್ಕಟ್ಟಿಗೆ ಸಿಲುಕಿದೆ.
ಪರಿಸರ ಬಿಕ್ಕಟ್ಟು ಮತ್ತು ಭ್ರಷ್ಟಾಚಾರ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಸರ್ಕಾರ ನಿರ್ವಹಿಸಿದ ರೀತಿಯನ್ನು ವಿರೋಧಿಸಿ ಮಂಗಳವಾರ ದೇಶಾದ್ಯಂತ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಈ ಬೆಳವಣಿಗೆಗಳ ನಡುವೆಯೇ ಉಪಾಧ್ಯಕ್ಷರ ರಾಜೀನಾಮೆ ಬೆಳವಣಿಗೆ ಇಂಡೋನೇಷ್ಯಾದ ರಾಜಕೀಯ ಬಿಕ್ಕಟ್ಟನ್ನು ಮತ್ತಷ್ಟು ಗಂಭೀರಗೊಳಿಸಿದೆ.
ಸೌಜನ್ಯ: bbc.com






