ಇರಾನ್ ಯುದ್ಧದ ವಿಚಾರದಲ್ಲಿ ಟ್ರಂಪ್–ನೆತನ್ಯಾಹು ನಡುವೆ ತೀವ್ರ ವಾಗ್ವಾದ: ವರದಿ

ಬೆಂಜಮಿನ್ ನೆತನ್ಯಾಹು , ಡೊನಾಲ್ಡ್ ಟ್ರಂಪ್ | Photo Credit : AP, PTI
ಟೆಲ್ ಅವೀವ್: ವಾಷಿಂಗ್ಟನ್ ಮತ್ತು ಟೆಲ್ ಅವೀವ್ ನಡುವೆ ಇರಾನ್ ವಿರುದ್ಧದ ಯುದ್ಧದ ವಿಚಾರದಲ್ಲಿ ಮೇಲ್ನೋಟಕ್ಕೆ ಒಗ್ಗಟ್ಟು ಕಾಣಿಸಿಕೊಂಡಿದ್ದರೂ, ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತಿವೆ ಎಂದು ಇಸ್ರೇಲ್ ಮೂಲದ ಮಾಧ್ಯಮ ವರದಿ ಮಾಡಿದೆ.
ಇರಾನ್ ವಿಚಾರದಲ್ಲಿ ಮತ್ತೊಮ್ಮೆ ರಾಜತಾಂತ್ರಿಕ ಮಾತುಕತೆಗೆ ಅವಕಾಶ ನೀಡಬೇಕು ಎಂಬುದು ಟ್ರಂಪ್ ನಿಲುವು. ಆದರೆ ಇರಾನ್ನಲ್ಲಿರುವ ಈಗಿನ ಆಡಳಿತವನ್ನು ಉರುಳಿಸಿ, ಮತ್ತೆ ಮಿಲಿಟರಿ ದಾಳಿ ನಡೆಸಬೇಕು ಎಂಬುದು ನೆತನ್ಯಾಹು ಅವರ ಒತ್ತಾಯ. ಇದೇ ವೇಳೆ ಇಸ್ರೇಲ್ನೊಳಗೂ ನೆತನ್ಯಾಹು ಅವರಿಗೆ ರಾಜಕೀಯ ಸವಾಲು ಎದುರಾಗಿದ್ದು, ಪ್ರತಿಪಕ್ಷಗಳು ಮೈತ್ರಿ ಸರಕಾರ ರಚಿಸುವ ಮೂಲಕ ಅವರ ದೀರ್ಘಕಾಲದ ಅಧಿಕಾರಕ್ಕೆ ಅಂತ್ಯ ಹಾಡಲು ಪ್ರಯತ್ನಿಸುತ್ತಿವೆ.
ಇಸ್ರೇಲ್ನ ಸುದ್ದಿ ಸಂಸ್ಥೆ ‘ವೈನೆಟ್’ (Ynet) ವರದಿಯ ಪ್ರಕಾರ, ವಾರಾಂತ್ಯದಲ್ಲಿ ಟ್ರಂಪ್ ಮತ್ತು ನೆತನ್ಯಾಹು ನಡುವೆ ಇರಾನ್ ವಿರುದ್ಧ ಮುಂದಿನ ಕ್ರಮಗಳ ಕುರಿತು ತೀವ್ರ ವಾಗ್ವಾದ ನಡೆದಿದೆ. ಈ ದೂರವಾಣಿ ಸಂಭಾಷಣೆಯ ಬಗ್ಗೆ ಮಾಹಿತಿ ಹೊಂದಿರುವ ಮೂಲಗಳನ್ನು ಉಲ್ಲೇಖಿಸಿ ವರದಿ ಪ್ರಕಟಿಸಲಾಗಿದೆ.
ಇಬ್ಬರು ನಾಯಕರ ನಡುವಿನ ಮಾತುಕತೆಯು ‘ನರಕದ ಕೂಗಾಟದಂತಿತ್ತು’ ಎಂದು ಮೂಲವೊಂದು ಬಣ್ಣಿಸಿದೆ. ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ಮತ್ತೆ ಮಿಲಿಟರಿ ದಾಳಿ ನಡೆಸಬೇಕೇ ಅಥವಾ ರಾಜತಾಂತ್ರಿಕ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಬೇಕೇ ಎಂಬ ವಿಚಾರದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎನ್ನಲಾಗಿದೆ.
ಆದರೆ, ಈ ವರದಿಯನ್ನು ನೆತನ್ಯಾಹು ಕಚೇರಿ ತಳ್ಳಿಹಾಕಿದ್ದು, ‘ಇದು ಸುಳ್ಳು ಸುದ್ದಿ, ಸಂಪೂರ್ಣ ಅಸಂಬದ್ಧ’ ಎಂದು ಹೇಳಿದೆ. ಮಾತುಕತೆ ವೇಳೆ ಯಾವುದೇ ರೀತಿಯ ವಾಗ್ವಾದ ನಡೆದಿಲ್ಲ ಎಂದು ಇಸ್ರೇಲ್ನ ಹಿರಿಯ ಅಧಿಕಾರಿಯೊಬ್ಬರೂ ನಿರಾಕರಿಸಿದ್ದಾರೆ.
ಫೈನಾನ್ಷಿಯಲ್ ಟೈಮ್ಸ್ ವರದಿಯ ಪ್ರಕಾರ, ಇರಾನ್ ಮೇಲೆ ಮತ್ತೆ ದಾಳಿ ನಡೆಸುವಂತೆ ಒತ್ತಾಯಿಸಲು ನೆತನ್ಯಾಹು ಪ್ರತಿದಿನ ಟ್ರಂಪ್ಗೆ ಕರೆ ಮಾಡುತ್ತಿದ್ದಾರೆ. ಇದೇ ವೇಳೆ ಅಮೆರಿಕದ ಅಧಿಕಾರಿಗಳು ಮತ್ತು ಪ್ರಾದೇಶಿಕ ನಾಯಕರು ಮತ್ತೊಂದು ಸಂಘರ್ಷ ಉಂಟಾಗದಂತೆ ತಡೆಯಲು ಪ್ರಯತ್ನಿಸುತ್ತಿದ್ದಾರೆ.
ಆದರೆ, ಇರಾನ್ ವಿರುದ್ಧ ತಕ್ಷಣ ಮತ್ತೊಂದು ಮಿಲಿಟರಿ ಕಾರ್ಯಾಚರಣೆ ನಡೆಸುವ ಅಗತ್ಯವಿಲ್ಲ ಎಂಬ ನಿಲುವನ್ನು ಟ್ರಂಪ್ ವ್ಯಕ್ತಪಡಿಸಿದ್ದಾರೆ.
ನವೆಂಬರ್ 8ರಂದು ಪ್ರಸಾರವಾದ ಸಿಬಿಎಸ್ ವಾಹಿನಿಯ ‘60 ಮಿನಿಟ್ಸ್’ ಸಂದರ್ಶನದಲ್ಲಿ, ಇರಾನ್ ವಿರುದ್ಧ ಮತ್ತೆ ಮಿಲಿಟರಿ ಕ್ರಮ ಕೈಗೊಳ್ಳುವ ಸಾಧ್ಯತೆಯ ಕುರಿತು ಕೇಳಿದ ಪ್ರಶ್ನೆಗೆ ಟ್ರಂಪ್, “ನಾನು ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಲು ಬಯಸುವುದಿಲ್ಲ. ಅದಕ್ಕೆ ಯಾವುದೇ ಕಾರಣವಿದೆ ಎಂದು ನನಗನಿಸುವುದಿಲ್ಲ” ಎಂದು ಉತ್ತರಿಸಿದ್ದರು.
ಇದಕ್ಕೆ ವಿರುದ್ಧವಾಗಿ ನೆತನ್ಯಾಹು ಇರಾನ್ ವಿಚಾರದಲ್ಲಿ ಕಠಿಣ ನಿಲುವು ಹೊಂದಿದ್ದಾರೆ. ಈಗಿನ ಇರಾನ್ ಆಡಳಿತ ಮುಂದುವರಿದರೆ, ಅದು ಮತ್ತೆ ತನ್ನ ಪರಮಾಣು ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಬಹುದು ಎಂದು ಪ್ರತಿಪಾದಿಸುತ್ತಿದ್ದಾರೆ.






