ಅಂತರಾಷ್ಟ್ರೀಯ ನ್ಯಾಯಾಲಯದ ವಿಚಾರಣೆ |ಫೆಲೆಸ್ತೀನ್ನಲ್ಲಿ ದ್ವಿರಾಷ್ಟ್ರ ಸೂತ್ರ ಅನಿವಾರ್ಯ: ಒಐಸಿ ಪ್ರತಿಪಾದನೆ

Photo: al-monitor.com
ಹೇಗ್ : ಫೆಲೆಸ್ತೀನಿಯನ್ ಪ್ರದೇಶಗಳನ್ನು ಇಸ್ರೇಲ್ ಆಕ್ರಮಿಸಿಕೊಂಡಿರುವ ಕಾನೂನುಬದ್ಧತೆಗೆ ಸಂಬಂಧಿಸಿ ವಿಶ್ವಸಂಸ್ಥೆಯ ಅತ್ಯುನ್ನತ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯ ಅಂತಿಮ ದಿನವಾದ ಸೋಮವಾರ ಟರ್ಕಿ, ಅರಬ್ ಲೀಗ್, ಒಐಸಿ(ಇಸ್ಲಾಮಿಕ್ ಸಹಕಾರ ಸಂಘಟನೆ) ಮತ್ತು ಆಫ್ರಿಕನ್ ಯೂನಿಯನ್ ಪ್ರತಿನಿಧಿಗಳು ತಮ್ಮ ವಾದ ಮಂಡಿಸಿದ್ದಾರೆ.
ಪ್ರಾದೇಶಿಕ ಶಾಂತಿಗೆ ದ್ವಿರಾಷ್ಟ್ರ ಪರಿಹಾರ ಅನಿವಾರ್ಯ ಎಂದು ಒಐಸಿ ಪ್ರತಿಪಾದಿಸಿತು. `ಫೆಲೆಸ್ತೀನ್ನಲ್ಲಿ ದ್ವಿರಾಷ್ಟ್ರ ಪರಿಹಾರವನ್ನು ಆಧರಿಸಿದ ನ್ಯಾಯಸಮ್ಮತ, ಶಾಶ್ವತ ಮತ್ತು ಸಮಗ್ರ ಶಾಂತಿಯು ಈ ಪ್ರದೇಶದ ಎಲ್ಲಾ ಜನರ ಸುರಕ್ಷತೆ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಪುನರಾವರ್ತಿತ ಹಿಂಸಾಚಾರದಿಂದ ಅವರನ್ನು ರಕ್ಷಿಸುವ ಏಕೈಕ ಮಾರ್ಗವಾಗಿದೆ' ಎಂದು ಒಐಸಿ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ತಹಾ ಹೇಳಿದ್ದಾರೆ.
`ಇಸ್ರೇಲ್ಗೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಯಾವುದೇ ದೇಶ ರಫ್ತು ಮಾಡಬಾರದು. ಈ ಶಸ್ತ್ರಾಸ್ತ್ರಗಳನ್ನು ಇಸ್ರೇಲ್ ಸೇನೆ ಮತ್ತು ಪಶ್ಚಿಮದಂಡೆಯಲ್ಲಿ ಇಸ್ರೇಲ್ನ ವಸಾಹತುಗಳಲ್ಲಿ ನೆಲೆಸಿರುವವರು ಫೆಲೆಸ್ತೀನ್ ಜನರ ವಿರುದ್ಧ ಬಳಸಬಹುದು' ಎಂದವರು ಆಗ್ರಹಿಸಿದರು.
ಗಾಝಾದ ಮೇಲಿನ ಇಸ್ರೇಲ್ ದಾಳಿಯಲ್ಲಿ ಸುಮಾರು 30,000 ಫೆಲೆಸ್ತೀನೀಯರು ಹತರಾಗಿದ್ದು ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಪಶ್ಚಿಮದಂಡೆ ಮತ್ತು ಪೂರ್ವ ಜೆರುಸಲೇಮ್ನಲ್ಲಿ ಹಿಂಸಾಚಾರ ಹೆಚ್ಚಿದೆ. ಆದರೆ ಭುಗಿಲೆದ್ದಿರುವ ಹಿಂಸಾಚಾರವನ್ನು ಕೊನೆಗೊಳಿಸಿ ಅಂತರಾಷ್ಟ್ರೀಯ ಕಾನೂನನ್ನು ಎತ್ತಿಹಿಡಿಯುವಲ್ಲಿ ಮತ್ತು ಫೆಲೆಸ್ತೀನ್ ಜನತೆಗೆ ನ್ಯಾಯ ಒದಗಿಸುವಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಅಸಮರ್ಥವಾಗಿದೆ ಎಂದು ಇಬ್ರಾಹಿಂ ತಹಾ ಟೀಕಿಸಿದರು.
ಫೆಲೆಸ್ತೀನ್ ಮೇಲಿನ ಇಸ್ರೇಲ್ನ ದೀರ್ಘಾವಧಿಯ ಅತಿಕ್ರಮಣವನ್ನು ಅಂತ್ಯಗೊಳಿಸುವಲ್ಲಿನ ವೈಫಲ್ಯವು ಈಗ ಗಾಝಾದಲ್ಲಿ ಫೆಲೆಸ್ತೀನೀಯರು ಅನುಭವಿಸುತ್ತಿರುವ ನರಮೇಧಕ್ಕೆ ಸಮಾನವಾದ ಭಯಾನಕತೆಗೆ ಕಾರಣವಾಗಿದೆ ಎಂದು ಅರಬ್ ಲೀಗ್ನ ಪ್ರತಿನಿಧಿ ಅಬ್ದುಲ್ಹಕೀಮ್ ಅಲಿ ರಿಫಾಯಿ ಹೇಳಿದರು. `ಅತಿಕ್ರಮಣವು ಅಂತರಾಷ್ಟ್ರೀಯ ನ್ಯಾಯಕ್ಕೆ ಅಪಮಾನವಾಗಿದೆ. ಮತ್ತೊಬ್ಬರ ಭೂಮಿಯನ್ನು ವಶಪಡಿಸಿಕೊಳ್ಳುವುದು, ಹತ್ಯೆ, ಬೆದರಿಸುವುದು, ಜನರನ್ನು ಸ್ಥಳಾಂತರಿಸುವುದಕ್ಕೆ ಯಾವುದೇ ನೈತಿಕ ಅಥವಾ ನ್ಯಾಯಾಂಗ ಸಮರ್ಥನೆ ಇರುವುದಿಲ್ಲ. ಆದ್ದರಿಂದ ಇಸ್ರೇಲ್ನ ಆಕ್ರಮಣದ ಕಾನೂನುಬಾಹಿರತೆಯನ್ನು ಐಸಿಜೆ ದೃಢೀಕರಿಸಬೇಕು. ಈ ಕಾನೂನುಬಾಹಿರ ಕೃತ್ಯಗಳ ಬಗ್ಗೆ ಕಣ್ಣುಮುಚ್ಚಿ ಕುಳಿತಿರುವವರು, ಅದಕ್ಕೆ ಬೆಂಬಲ ನೀಡುವವರಿಗೆ ಎದುರಾಗಲಿರುವ ಕಾನೂನು ಪರಿಣಾಮಗಳ ಬಗ್ಗೆ ನಿಸ್ಸಂದಿಗ್ಧವಾಗಿ ತಿಳಿಸಬೇಕು ' ಎಂದವರು ಆಗ್ರಹಿಸಿದರು.
ಗಾಝಾದ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಆಕ್ರಮಣವು ಏಳು ದಶಕಗಳಿಂದ ಮುಂದುವರಿದಿರುವ ಇಸ್ರೇಲಿ ವಸಾಹತುಶಾಹಿ ಯೋಜನೆಯಿಂದ ವ್ಯವಸ್ಥಿತವಾಗಿ ತುಳಿತಕ್ಕೊಳಗಾದ ಪೆಲೆಸ್ತೀನೀಯರ ದುರಂತವನ್ನು ಪ್ರದರ್ಶಿಸುತ್ತದೆ ಎಂದು ಆಫ್ರಿಕನ್ ಯೂನಿಯನ್ ಪ್ರತಿನಿಧಿ ಹೇಜರ್ ಗುಲ್ಡಿಚ್ ಹೇಳಿದರು.
ಗಾಝಾದಲ್ಲಿ ಫೆಲೆಸ್ತೀನ್ ನಾಗರಿಕರ ಮೇಲೆ ಇಸ್ರೇಲ್ನ ವಿವೇಚನಾರಹಿತ ದಾಳಿಗೆ ಇಸ್ರೇಲ್ ಅನ್ನು ಹೊಣೆಗಾರನಾಗಿ ಮಾಡದಿದ್ದರೆ ಈ ವಲಯದ ಜನತೆ ಸಹನೆ ಕಳೆದುಕೊಳ್ಳಬಹುದು. ಅಂತರಾಷ್ಟ್ರೀಯ ಸುವ್ಯವಸ್ಥೆ ಮತ್ತು ಭದ್ರತೆಯನ್ನು ಕಾಪಾಡುವ ಪ್ರಾಥಮಿಕ ಜವಾಬ್ದಾರಿ ಹೊಂದಿರುವ ವಿಶ್ವಸಂಸ್ಥೆ ಗಾಝಾಕ್ಕೆ ಪರಿಹಾರ ಕಂಡುಕೊಳ್ಳಲು ವಿಫಲವಾಗಿದೆ ' ಎಂದು ಟರ್ಕಿಯ ಪ್ರತಿನಿಧಿ ಹೇಳಿದರು.
50ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳಿಂದ ವಾದ ಮಂಡನೆ
ಫೆಲೆಸ್ತೀನಿಯನ್ ಪ್ರದೇಶವನ್ನು ಇಸ್ರೇಲ್ ಸ್ವಾಧೀನಪಡಿಸಿಕೊಂಡಿರುವ ಕ್ರಮದ ಕಾನೂನು ಪರಿಣಾಮಗಳ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಐಸಿಜೆಯನ್ನು 2022ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕೋರಲಾಗಿತ್ತು. ಅದರಂತೆ ವಿಚಾರಣೆ ಆರಂಭಿಸಿದ್ದ ಅಂತರಾಷ್ಟ್ರೀಯ ನ್ಯಾಯಾಲಯ ಅಥವಾ ಐಸಿಜೆಯ 15 ಸದಸ್ಯರ ನ್ಯಾಯಪೀಠವು 50ಕ್ಕೂ ಹೆಚ್ಚು ದೇಶಗಳ ಮತ್ತು ಮೂರು ಸಂಘಟನೆಗಳ ವಾದವನ್ನು ಆಲಿಸಿದೆ.
ನ್ಯಾಯಾಧೀಶರು ಈ ಪ್ರಕರಣದಲ್ಲಿ ತಮ್ಮ ಅಭಿಪ್ರಾಯ ತಿಳಿಸಲು ಸುಮಾರು 6 ತಿಂಗಳು ತೆಗೆದುಕೊಳ್ಳುವ ನಿರೀಕ್ಷೆಯಿದೆ.







