ವಿದೇಶಿ ಯುದ್ಧನೌಕೆಗಳ ಉಪಸ್ಥಿತಿಗೆ ಹೆದರುವುದಿಲ್ಲ: Iran

ಸಾಂದರ್ಭಿಕ ಚಿತ್ರ | Photo Credit : AP
ಟೆಹ್ರಾನ್, ಜ.26: ತನ್ನ ಜಲಪ್ರದೇಶದ ಬಳಿ ವಿದೇಶಿ ಯುದ್ಧನೌಕೆಗಳ ಆಗಮನವು ದೇಶದ ರಕ್ಷಣಾ ನಿಲುವು ಮತ್ತು ರಾಜತಾಂತ್ರಿಕತೆಯ ವಿಧಾನಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಇರಾನ್ ಸೋಮವಾರ ಹೇಳಿದ್ದು, ಭಿತ್ತಿಚಿತ್ರದ ಮೂಲಕ ಅಮೆರಿಕಾಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದೆ.
ಅಮೆರಿಕಾದ ಯುಎಸ್ಎಸ್ ಅಬ್ರಹಾಂ ಲಿಂಕನ್ ವಿಮಾನವಾಹಕ ನೌಕೆ ಮತ್ತು ಅದರೊಂದಿಗೆ ಇತರ ಯುದ್ಧನೌಕೆಗಳು ಮಧ್ಯಪ್ರಾಚ್ಯವನ್ನು ತಲುಪಿದ್ದು, ಇರಾನ್ ಸಮೀಪ ಕಾರ್ಯನಿರ್ವಹಿಸುತ್ತಿವೆ ಎಂಬ ವರದಿಗೆ ಪ್ರತಿಕ್ರಿಯಿಸಿರುವ ಇರಾನಿನ ವಿದೇಶಾಂಗ ಸಚಿವಾಲಯ, ‘ಮಾತುಕತೆಗೆ ಬಾಗಿಲು ತೆರೆದಿರುವಂತೆಯೇ ದೇಶವನ್ನು ರಕ್ಷಿಸಿಕೊಳ್ಳಲು ನಮ್ಮ ಪಡೆಗಳು ಬದ್ಧವಾಗಿವೆ. ನಮ್ಮ ನಿಲುವು ಸ್ಪಷ್ಟವಾಗಿದೆ. ನಾವು ಯಾವತ್ತೂ ಯುದ್ಧವನ್ನು ಸ್ವಾಗತಿಸಿಲ್ಲ ಮತ್ತು ಯಾವತ್ತೂ ರಾಜತಾಂತ್ರಿಕತೆ ಹಾಗೂ ಮಾತುಕತೆಯಿಂದ ವಿಮುಖವಾಗಿಲ್ಲ. ಇದನ್ನು ಕಾರ್ಯರೂಪದಲ್ಲಿಯೇ ತೋರಿಸಿದ್ದೇವೆ’ ಎಂದು ಹೇಳಿದೆ.
‘ವಿದೇಶಿ ನೌಕಾ ಪಡೆಗಳ ಉಪಸ್ಥಿತಿಯು ಇರಾನಿನ ಸಂಕಲ್ಪವನ್ನು ಮತ್ತು ದೇಶವನ್ನು ರಕ್ಷಿಸುವ ದೃಢನಿರ್ಧಾರವನ್ನು ದುರ್ಬಲಗೊಳಿಸುವುದಿಲ್ಲ. ನಮ್ಮ ಜನರ ಬೆಂಬಲದೊಂದಿಗೆ ಇರಾನ್ ಅನ್ನು ರಕ್ಷಿಸಿಕೊಳ್ಳಲು ಸಂಪೂರ್ಣ ಸಂಕಲ್ಪ ಮತ್ತು ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘೈ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಈ ನಡುವೆ, ಇರಾನ್ ರಾಜಧಾನಿ ಟೆಹ್ರಾನ್ನ ಇಂಕ್ವೆಲಾಬ್ ಚೌಕದಲ್ಲಿ ಬೃಹತ್ ಭಿತ್ತಿಪಲಕದಲ್ಲಿ ಪ್ರದರ್ಶಿಸಲಾದ ಭಿತ್ತಿಚಿತ್ರದ ಮೂಲಕ, ದೇಶದ ವಿರುದ್ಧ ಸೈನಿಕ ದಾಳಿ ನಡೆಸದಂತೆ ಅಮೆರಿಕಾಕ್ಕೆ ನೇರ ಎಚ್ಚರಿಕೆ ರವಾನಿಸಲಾಗಿದೆ.
ಭಿತ್ತಿಚಿತ್ರದಲ್ಲಿ ಹಾನಿಗೊಂಡು ಸ್ಫೋಟಗೊಳ್ಳುತ್ತಿರುವ ಯುದ್ಧವಿಮಾನಗಳ ಪಕ್ಷಿನೋಟವನ್ನು ತೋರಿಸಲಾಗಿದೆ. ಯುದ್ಧವಿಮಾನಗಳ ಸ್ಫೋಟವನ್ನು ನಕ್ಷತ್ರದ ಆಕಾರದಲ್ಲಿ ಚಿತ್ರಿಸಲಾಗಿದೆ. ಯುದ್ಧವಿಮಾನದ ಕಾಕ್ಪಿಟ್ನಲ್ಲಿ ಬಿದ್ದಿರುವ ಮೃತದೇಹಗಳು ಮತ್ತು ರಕ್ತವು ಕೆಳಗಿರುವ ನೀರಿಗೆ ಹರಿಯುತ್ತಿರುವುದನ್ನು, ಜೊತೆಗೆ ಅಮೆರಿಕಾದ ರಾಷ್ಟ್ರೀಯ ಧ್ವಜದ ಮೇಲಿನ ಪಟ್ಟಿಗಳ ಮಾದರಿಯನ್ನು ಅನುಕರಿಸಲಾಗಿದೆ. ಚಿತ್ರದ ಬದಿಯಲ್ಲಿ ‘ನೀವು ಗಾಳಿಯನ್ನು ಬಿತ್ತಿದರೆ ಸುಂಟರಗಾಳಿಯನ್ನು ಕೊಯ್ಲು ಮಾಡುತ್ತೀರಿ’ ಎಂಬ ಎಚ್ಚರಿಕೆ ನೀಡಲಾಗಿದೆ.
ಇರಾನಿನಲ್ಲಿ ಅಶಾಂತಿ ಮುಂದುವರಿದರೆ ಆ ದೇಶದ ಮೇಲೆ ಅಮೆರಿಕಾ ದಾಳಿ ನಡೆಸಲಿದೆ. ಇಡೀ ದೇಶವೇ ಸ್ಫೋಟಗೊಳ್ಳಲಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಎಚ್ಚರಿಕೆಗೆ ಪ್ರತಿಯಾಗಿ ಇರಾನ್ ಭಿತ್ತಿಪಲಕದ ಮೂಲಕ ಪ್ರತ್ಯುತ್ತರ ರವಾನಿಸಿದೆ.
ಕೆಂಪು ಸಮುದ್ರದಲ್ಲಿ ಮತ್ತೆ ದಾಳಿ: ಹೌದಿಗಳ ಎಚ್ಚರಿಕೆ
ಕೆಂಪು ಸಮುದ್ರ ಕಾರಿಡಾರ್ನ ಮೂಲಕ ಪ್ರಯಾಣಿಸುವ ಹಡಗುಗಳ ಮೇಲೆ ಮತ್ತೆ ದಾಳಿ ಆರಂಭಿಸುವುದಾಗಿ ಯೆಮನ್ನ ಹೌದಿ ಬಂಡುಕೋರ ಗುಂಪು ಸೋಮವಾರ ಎಚ್ಚರಿಕೆ ನೀಡಿದೆ.
ಕೆಂಪು ಸಮುದ್ರದಲ್ಲಿ ಬೆಂಕಿಯಲ್ಲಿ ಉರಿಯುತ್ತಿರುವ ಹಡಗಿನ ವೀಡಿಯೊವನ್ನು ಪ್ರಸಾರ ಮಾಡಿರುವ ಹೌದಿಗಳು, ಅದರ ಜೊತೆಗೆ ‘ಶೀಘ್ರದಲ್ಲೇ’ ಎಂಬ ಕ್ಯಾಪ್ಷನ್ ನೀಡಿದ್ದಾರೆ. ಇರಾನಿನತ್ತ ಚಲಿಸುತ್ತಿರುವ ಅಮೆರಿಕಾದ ಯುದ್ಧನೌಕೆಗಳನ್ನು ಉದ್ದೇಶಿಸಿ ಹಾಗೂ ಇರಾನಿಗೆ ಬೆಂಬಲ ಸೂಚಿಸಿ ಈ ಎಚ್ಚರಿಕೆ ರವಾನಿಸಿರುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ವಿಶ್ಲೇಷಿಸಿವೆ.







