ಸಮಾಲೋಚನೆ ಪ್ರಾಮಾಣಿಕವಾಗಿದ್ದರೆ ಅಮೆರಿಕಾ ಜೊತೆ ಮಾತುಕತೆ: ಇರಾನ್

ಮುಹಮ್ಮದ್ ಬಾಗರ್ ಘಾಲಿಬಾಫ್ | Photo Credit : aljazeera.com
ಟೆಹ್ರಾನ್, ಜ.29: ಪರಮಾಣು ಶಸ್ತ್ರಾಸ್ತ್ರಗಳ ಬಗ್ಗೆ ನೈಜ ಒಪ್ಪಂದವನ್ನು ತಲುಪುವಲ್ಲಿ ಪ್ರಾಮಾಣಿಕವಾಗಿದ್ದರೆ ಮಾತ್ರ ಅಮೆರಿಕಾದೊಂದಿಗೆ ಮಾತುಕತೆಗೆ ಇರಾನ್ ಮುಕ್ತವಾಗಿದೆ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮುಹಮ್ಮದ್ ಬಾಗರ್ ಘಾಲಿಬಾಫ್ ಹೇಳಿದ್ದು ಒಂದು ವೇಳೆ ಇರಾನ್ನ ಮೇಲೆ ದಾಳಿ ಮಾಡಿದರೆ ಅಮೆರಿಕಾದ ಸೈನಿಕರಿಗೆ ಹಾನಿ ಮಾಡುವುದಾಗಿ ಎಚ್ಚರಿಸಿದ್ದಾರೆ.
ಇರಾನ್ ಮಾತುಕತೆಗೆ ಮುಕ್ತವಾಗಿದ್ದರೂ, ಅಮೆರಿಕಾದ ಅಧ್ಯಕ್ಷರ ಮಾತುಗಳನ್ನು ಗಮನಿಸಿದರೆ ಅವರು ತನ್ನ ಇಚ್ಛೆಯನ್ನು ನಮ್ಮ ಮೇಲೆ ಬಲವಂತವಾಗಿ ಹೇರುವ ಉದ್ದೇಶವನ್ನು ಹೊಂದಿರುವುದು ಸ್ಪಷ್ಟವಾಗಿದೆ. 2015ರಲ್ಲಿ ಟ್ರಂಪ್ ಪರಮಾಣು ಒಪ್ಪಂದವನ್ನು ಹರಿದು ಕಸದ ಬುಟ್ಟಿಗೆ ಎಸೆದರು. ಈಗ ಮುಂದಿನ ಮಾತುಕತೆ ಪುನರಾರಂಭಗೊಳ್ಳುವ ಕೆಲವೇ ದಿನಗಳ ಮೊದಲು ಇರಾನ್ ಮೇಲಿನ ಇಸ್ರೇಲ್ ದಾಳಿಗೆ ಹಸಿರು ನಿಶಾನೆ ತೋರುವ ಮೂಲಕ ಮಾತುಕತೆಗಳನ್ನು ಹಾಳು ಮಾಡುತ್ತಿದ್ದಾರೆ ಎಂದು ಘಾಲಿಬಾಫ್ ಆರೋಪಿಸಿದ್ದಾರೆ.
ನೈಜ ಒಪ್ಪಂದವನ್ನು ತಲುಪುವ ಪ್ರಾಮಾಣಿಕ ಮಾತುಕತೆ, ಅಂತರಾಷ್ಟ್ರೀಯ ನಿಯಮಗಳ ಚೌಕಟ್ಟಿನಡಿ ನಡೆದರೆ ಮಾತ್ರ ಇರಾನ್ ಸಮಾಲೋಚನೆಗೆ ಮುಂದಾಗುತ್ತದೆ. ಟ್ರಂಪ್ ನಿಜವಾಗಿಯೂ ಶಾಂತಿಯನ್ನು ಬಯಸಿದರೆ ಯುದ್ದಾಸಕ್ತರಿಂದ ಮತ್ತು ಇರಾನ್ ಶರಣಾಗಬೇಕೆಂದು ಆಗ್ರಹಿಸುವವರಿಂದ ದೂರವಿರಬೇಕು. ಟ್ರಂಪ್ ಅವರು ಯುದ್ದವನ್ನು ಆರಂಭಿಸಬಹುದು, ಆದರೆ ಅದು ಹೇಗೆ ಕೊನೆಗೊಳ್ಳುತ್ತದೆ ಎಂಬುದು ಅವರ ನಿಯಂತ್ರಣದಲ್ಲಿ ಇರುವುದಿಲ್ಲ ' ಎಂದವರು ಎಚ್ಚರಿಕೆ ನೀಡಿದ್ದಾರೆ.
ಇರಾನ್ ಆಡಳಿತದ ಅಂತ್ಯ ಸಮೀಪಿಸುತ್ತಿದೆ: ಜರ್ಮನಿ
ಇರಾನ್ ಆಡಳಿತದ ಅಂತ್ಯಕ್ಕೆ ದಿನಗಣನೆ ಆರಂಭವಾಗಿದೆ. ಬಹುಷಃ ಕೆಲವು ವಾರಗಳಲ್ಲೇ ಬದಲಾವಣೆ ಸಂಭವಿಸಬಹುದು ಎಂದು ಜರ್ಮನಿ ಛಾನ್ಸಲರ್ ಫ್ರೆಡ್ರಿಕ್ ಮೆರ್ಝ್ ಹೇಳಿದ್ದಾರೆ.
ತನ್ನದೇ ಜನರ ವಿರುದ್ಧ ಬಲಪ್ರಯೋಗ ಮತ್ತು ಭಯೋತ್ಪಾದನೆಯ ಮೂಲಕ ಅಧಿಕಾರವನ್ನು ನಿಯಂತ್ರಿಸುವ ಯಾವುದೇ ಆಡಳಿತ ಹೆಚ್ಚು ಕಾಲ ಬಾಳುವುದಿಲ್ಲ. ಈ ಆಡಳಿತವು ದೇಶವನ್ನು ಆಳಲು ಯಾವುದೇ ಕಾನೂನುಬದ್ಧತೆಯನ್ನು ಹೊಂದಿಲ್ಲ ಎಂದವರು ಪ್ರತಿಪಾದಿಸಿರುವುದಾಗಿ ಎಎಫ್ಪಿ ಸುದ್ದಿಸಂಸ್ಥೆ ಗುರುವಾರ ವರದಿ ಮಾಡಿದೆ.







