ಪರಮಾಣು ಒಪ್ಪಂದದ ಬಗ್ಗೆ ಅಮೆರಿಕಾ ಜೊತೆ ಮಾತುಕತೆ ಆರಂಭಿಸಲು ಇರಾನ್ ಆದೇಶ: ವರದಿ

ಮಸೂದ್ ಪೆಜೆಷ್ಕಿಯಾನ್ | Photo Credit : AP \ PTI
ಟೆಹ್ರಾನ್: ಅಮೆರಿಕಾದೊಂದಿಗೆ ಮಾತುಕತೆ ಆರಂಭಿಸುವಂತೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಷ್ಕಿಯಾನ್ ಆದೇಶಿಸಿರುವುದಾಗಿ ಉನ್ನತ ಮೂಲಗಳನ್ನು ಉಲ್ಲೇಖಿಸಿ `ಫಾರ್ಸ್' ಸುದ್ದಿಸಂಸ್ಥೆ ಸೋಮವಾರ ವರದಿ ಮಾಡಿದೆ.
`ಪರಮಾಣು ವಿಷಯದ ಬಗ್ಗೆ ಇರಾನ್ ಮತ್ತು ಅಮೆರಿಕಾ ಮಾತುಕತೆ ನಡೆಸಲಿವೆ' ಎಂದು ವರದಿ ಹೇಳಿದ್ದು ದಿನಾಂಕದ ಬಗ್ಗೆ ಮಾಹಿತಿ ನೀಡಿಲ್ಲ. ಇದಕ್ಕೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಇರಾನ್ನ ವಿದೇಶಾಂಗ ಇಲಾಖೆಯ ವಕ್ತಾರ ಇಸ್ಮಾಯಿಲ್ ಬಘೈ `ಅಮೆರಿಕಾದೊಂದಿಗಿನ ಉದ್ವಿಗ್ನತೆಯನ್ನು ನಿರ್ವಹಿಸಲು ವಿವಿಧ ರಾಜತಾಂತ್ರಿಕ ಆಯ್ಕೆಗಳನ್ನು ಇರಾನ್ ಪರಿಶೀಲಿಸುತ್ತಿದೆ ಮತ್ತು ಮುಂದಿನ ದಿನಗಳಲ್ಲಿ ಫಲಿತಾಂಶಗಳನ್ನು ನಿರೀಕ್ಷಿಸುತ್ತದೆ. ಪ್ರಾದೇಶಿಕ ರಾಷ್ಟ್ರಗಳ ನಡುವೆ ವಿವಿಧ ಸಂದೇಶಗಳನ್ನು, ವಿವಿಧ ಅಂಶಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ. ನಾವು ಪ್ರಸ್ತುತ ಪ್ರತೀ ರಾಜತಾಂತ್ರಿಕ ಪ್ರಕ್ರಿಯೆಯ ವಿವರಗಳನ್ನು ಪರಿಶೀಲಿಸುತ್ತಿದ್ದೇವೆ ' ಎಂದು ಹೇಳಿದ್ದರು.
ಈ ಮಧ್ಯೆ, ಅಮೆರಿಕಾದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಇರಾನ್ನ ಪರಮೋಚ್ಛ ನಾಯಕ ಆಯತುಲ್ಲಾ ಆಲಿ ಖಾಮಿನೈ `ಅಮೆರಿಕಾದ ಒತ್ತಡವನ್ನು ಪ್ರತಿರೋಧಿಸುವುದನ್ನು ಇರಾನ್ ಮುಂದುವರಿಸುತ್ತದೆ. ಇರಾನ್ ದೃಢವಾಗಿ ನಿಲ್ಲುತ್ತದೆ ಮತ್ತು ದೈವೇಚ್ಛೆಯಿದ್ದರೆ ಅಮೆರಿಕಾದ ಕಿಡಿಗೇಡಿತನ ಮತ್ತು ಕಿರುಕುಳ ಕೊನೆಗೊಳ್ಳುತ್ತದೆ' ಎಂದು ಹೇಳಿದ್ದಾರೆ.
ಅಮೆರಿಕಾ ಮತ್ತು ಇರಾನ್ನ ನಡುವಿನ ಬಿಕ್ಕಟ್ಟಿಗೆ ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ಸರಳವಿದೆ `ಅಮೆರಿಕಾವು ಇರಾನ್ ಅನ್ನು ಕಬಳಿಸಲು ಬಯಸುತ್ತಿದೆ ಮತ್ತು ಇರಾನ್ ರಾಷ್ಟ್ರ ಇದನ್ನು ತಡೆಯುತ್ತಿದೆ. ಅವರು ನಮ್ಮ ನೈಸರ್ಗಿಕ ಸಂಪನ್ಮೂಲಗಳು, ಕಾರ್ಯತಂತ್ರದ ಸ್ಥಾನವನ್ನು ಅಪೇಕ್ಷಿಸುತ್ತಿದ್ದಾರೆ'' ಎಂದು ಖಾಮಿನೈ ಪ್ರತಿಪಾದಿಸಿದ್ದಾರೆ.
ಇರಾನ್ ಜೊತೆ ಒಪ್ಪಂದದ ಭರವಸೆಯಿದೆ ಎಂದ ಟ್ರಂಪ್:
ಇರಾನ್ ಜೊತೆ ಒಪ್ಪಂದ ಮಾಡಿಕೊಳ್ಳುವ ಭರವಸೆಯಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು ರಾಜತಾಂತ್ರಿಕತೆ ವಿಫಲವಾದರೆ ಫಲಿತಾಂಶ ಸ್ಪಷ್ಟವಾಗಿದೆ ಎಂದು ಎಚ್ಚರಿಸಿದ್ದಾರೆ.
ಫ್ಲೋರಿಡಾದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಟ್ರಂಪ್ ` ಆ ಪ್ರದೇಶದಲ್ಲಿ ನಾವು ಅತೀ ದೊಡ್ಡ, ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿ ಸಮರ ನೌಕೆಗಳನ್ನು ಹೊಂದಿದ್ದೇವೆ. ಮುಂದಿನ ಒಂದೆರಡು ದಿನಗಳಲ್ಲಿ ನಾವು ಒಪ್ಪಂದ ಮಾಡಿಕೊಳ್ಳುವ ಭರವಸೆಯಿದೆ. ಒಪ್ಪಂದ ಸಾಧ್ಯವಾಗದಿದ್ದರೆ, ಇರಾನ್ನ ನಾಯಕರು ಹೇಳಿದ ಮಾತು ಸರಿಯಾಗುತ್ತದಯೇ ಎಂಬುದನ್ನು ನೋಡಬೇಕಿದೆ' ಎಂದು ಹೇಳಿದರು. ಒಂದು ವೇಳೆ ಅಮೆರಿಕಾವು ಇರಾನ್ನ ಮೇಲೆ ದಾಳಿ ಮಾಡಿದರೆ ಅದು ಪ್ರಾದೇಶಿಕ ಸಂಘರ್ಷವಾಗುತ್ತದೆ ಎಂದು ಇರಾನ್ನ ಪರಮೋಚ್ಛ ನಾಯಕ ಆಯತುಲ್ಲಾ ಆಲಿ ಖಾಮಿನೈ ರವಿವಾರ ಎಚ್ಚರಿಸಿದ್ದರು.







