ಹೊಸ ಶಾಂತಿ ಯೋಜನೆ ಪ್ರಸ್ತಾಪಿಸಿದ ಇರಾನ್: ಯುದ್ಧ ಅಂತ್ಯ, ನಿರ್ಬಂಧ ತೆರವು ಸೇರಿದಂತೆ 14 ಅಂಶಗಳ ಯೋಜನೆ

ಸಾಂದರ್ಭಿಕ ಚಿತ್ರ | Photo Credit : PTI
ಟೆಹರಾನ್, ಮೇ 3: ಅಮೆರಿಕದೊಂದಿಗೆ ಶಾಂತಿ ಮಾತುಕತೆಯ ಬಿಕ್ಕಟ್ಟನ್ನು ಬಿಡಿಸುವ ಪ್ರಯತ್ನವಾಗಿ ಇರಾನ್ ಅಮೆರಿಕಕ್ಕೆ ಬಹು ಪದರದ ಪ್ರಸ್ತಾಪವನ್ನು ರವಾನಿಸಿದೆ ಎಂದು ಬೆಳವಣಿಗೆಯ ಬಗ್ಗೆ ತಿಳಿದಿರುವ ಹಿರಿಯ ಅಧಿಕಾರಿಯೊಬ್ಬರು ರವಿವಾರ ಹೇಳಿದ್ದಾರೆ.
ಹೊಸ ಪ್ರಸ್ತಾವನೆಯು ತಕ್ಷಣದ ಸಂಘರ್ಷವನ್ನು ನಿವಾರಿಸುವ ಬಗ್ಗೆ ತ್ವರಿತ ಮತ್ತು ತಕ್ಷಣದ ಗಮನ ವಹಿಸಿ, ಇರಾನ್ನ ಪರಮಾಣು ಕಾರ್ಯಕ್ರಮದ ಕುರಿತ ಹೆಚ್ಚು ಸಂಕೀರ್ಣವಾದ ಮತ್ತು ದೀರ್ಘಕಾಲದ ವಿವಾದವನ್ನು ಮುಂದಿನ ಹಂತದಲ್ಲಿ ಚರ್ಚಿಸಲು ಪ್ರಯತ್ನಿಸುವ ಹಂತ ಹಂತದ ವಿಸ್ತರಣೆಯ ಚೌಕಟ್ಟಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಅಮೆರಿಕವು ಇರಾನ್ನ ತೈಲ ರಫ್ತಿನ ಮೇಲೆ ಪರಿಣಾಮ ಬೀರುವ ನಿರ್ಬಂಧ ಸೇರಿದಂತೆ ತನ್ನ ಮಿಲಿಟರಿ ನಿಲುವನ್ನು ಮತ್ತು ಆರ್ಥಿಕ ಒತ್ತಡವನ್ನು ಸಡಿಲಗೊಳಿಸಿದರೆ ಹಾರ್ಮುಜ್ ಜಲಸಂಧಿಯ ಸುತ್ತಮುತ್ತಲಿನ ಉದ್ವಿಗ್ನತೆಯನ್ನು ಕಡಿಮೆಗೊಳಿಸುವ ಇಚ್ಛೆಯನ್ನು ವ್ಯಕ್ತಪಡಿಸಿದೆ. ವಾಸ್ತವಿಕ ಮಾತುಕತೆಗಳ ಪ್ರವೇಶಿಸುವ ಮುನ್ನ ವಿಶ್ವಾಸ ನಿರ್ಮಾಣ ಹಂತಗಳು ಅಗತ್ಯವಾಗಿದೆ ಎಂದು ಇರಾನ್ ಹೇಳಿದ್ದು ಶಾಂತಿಯುತ ಪರಮಾಣು ಶಕ್ತಿಯ ಮೇಲಿನ ತನ್ನ ಹಕ್ಕನ್ನು ಪುನರುಚ್ಚರಿಸಿದ್ದು ಯುರೇನಿಯಂ ಸಂವರ್ಧನೆಯ ಮಿತಿಯ ಬಗ್ಗೆ, ವರ್ಧಿತ ಮೇಲ್ವಿಚಾರಣಾ ಕಾರ್ಯವಿಧಾನದ ಬಗ್ಗೆ ಚರ್ಚಿಸಲು ಮುಕ್ತವಾಗಿರುವುದಾಗಿ ಹೇಳಿದೆ. ಆದರೆ ನಿರ್ಬಂಧಗಳನ್ನು ತೆರವುಗೊಳಿಸುವ ಬಗ್ಗೆ ಸ್ಪಷ್ಟ ಖಾತರಿಗೆ ಪಟ್ಟುಹಿಡಿದಿದೆ.
ಯಾವುದೇ ಒಪ್ಪಂದವು ದೀರ್ಘಕಾಲ ಉಳಿಯಬೇಕು ಮತ್ತು ಏಕಪಕ್ಷೀಯವಾಗಿ ಒಪ್ಪಂದದಿಂದ ಹಿಂದಕ್ಕೆ ಸರಿಯಲು ಅವಕಾಶ ಇರಬಾರದು. ಅಂತರಾಷ್ಟ್ರೀಯ ಚೌಕಟ್ಟುಗಳಡಿ ತನ್ನ ಪರಮಾಣು ಹಕ್ಕುಗಳನ್ನು ಅಧಿಕೃತವಾಗಿ ಗುರುತಿಸಬೇಕು. ಭದ್ರತೆಯ ಖಾತರಿ ಒದಗಿಸಬೇಕು. ಅಮೆರಿಕ ಮತ್ತು ಅದರ ಪ್ರಾದೇಶಿಕ ಮಿತ್ರರಾಷ್ಟ್ರಗಳಿಂದ ನವೀಕೃತ ಆಕ್ರಮಣ ಅಥವಾ ಉಲ್ಬಣವನ್ನು ತಡೆಯುವ ಬದ್ಧತೆಯನ್ನು ಇರಾನ್ ಆಗ್ರಹಿಸಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಯುದ್ಧವನ್ನು ಕೊನೆಗೊಳಿಸಲು ಇರಾನ್ನ ಹೊಸ ಪ್ರಸ್ತಾಪ ಪರಿಶೀಲನೆಯಲ್ಲಿದೆ: ಟ್ರಂಪ್
ಯುದ್ಧವನ್ನು ಕೊನೆಗೊಳಿಸುವ ಇರಾನ್ನ ಹೊಸ ಪ್ರಸ್ತಾಪವನ್ನು ಪರಿಶೀಲಿಸುತ್ತಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು ಆದರೆ ಇದು ಒಪ್ಪಂದಕ್ಕೆ ಕಾರಣವಾಗುವ ಬಗ್ಗೆ ಸಂದೇಹವಿದೆ ಎಂದಿದ್ದಾರೆ.
ಅಮೆರಿಕದ 9 ಅಂಶಗಳ ಪ್ರಸ್ತಾಪಕ್ಕೆ ಪ್ರತಿಯಾಗಿ ಇರಾನ್ ಪಾಕಿಸ್ತಾನದ ಮೂಲಕ 14 ಅಂಶಗಳ ಪ್ರಸ್ತಾಪವನ್ನು ಅಮೆರಿಕಕ್ಕೆ ರವಾನಿಸಿದೆ ಎಂದು ಇರಾನ್ನ ತಸ್ನಿಮ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಇರಾನ್ ತನಗೆ ಹೊಸ ಪ್ರಸ್ತಾಪವನ್ನು ಹಸ್ತಾಂತರಿಸಿದೆ. ಆದರೆ ಇದು ಸ್ವೀಕಾರಾರ್ಹ ಎಂದು ಅನಿಸುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಟ್ರಂಪ್ ಹೇಳಿದ್ದಾರೆ. ಈ ಮಧ್ಯೆ, ಹಾರ್ಮುಝ್ ಜಲಸಂಧಿಯನ್ನು ಪುನಃ ತೆರೆಯಲು ಹೊಸ ಯೋಜನೆಯ ಬಗ್ಗೆ ಕಾರ್ಯ ನಿರ್ವಹಿಸುತ್ತಿರುವುದಾಗಿ ಟ್ರಂಪ್ ಹೇಳಿದ್ದಾರೆ.
ವಿಟ್ಕಾಫ್ ನೇತೃತ್ವದ ರಾಜತಂತ್ರಜ್ಞರ ತಂಡಕ್ಕೆ ಸಲಹೆಗಾರನಾಗಿ ನಿಕ್ ಸ್ಟಿವರ್ಟ್ ನೇಮಕ
ಇರಾನ್ನೊಂದಿಗೆ ನಡೆಯುತ್ತಿರುವ ಸಂಘರ್ಷದ ಅಂತ್ಯಕ್ಕೆ ಮಾತುಕತೆ ನಡೆಸುವ ರಾಜತಾಂತ್ರಿಕ ತಂಡಕ್ಕೆ ಸಲಹೆಗಾರರಾಗಿ ನಿಕ್ ಸ್ಟಿವರ್ಟ್ ನೇಮಕವನ್ನು ಶ್ವೇತಭವನ ದೃಢಪಡಿಸಿರುವುದಾಗಿ ಸಿಬಿಎಸ್ ನ್ಯೂಸ್ ವರದಿ ಮಾಡಿದೆ.
ಅಧಿಕೃತ ಹೇಳಿಕೆಯಲ್ಲಿ ಶ್ವೇತಭವನದ ವಕ್ತಾರೆ ಒಲಿವಿಯಾ ವೇಲ್ಸ್ ಅವರು ಸ್ಟಿವರ್ಟ್ ಅವರನ್ನು `ತೀಕ್ಷ್ಣವಾದ ಅನುಭವ ನೀತಿ ತಜ್ಞ ' ಎಂದು ವಿವರಿಸಿದ್ದು ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ನೇತೃತ್ವದ ನಿಯೋಗಕ್ಕೆ ಗಮನಾರ್ಹ ಆಸ್ತಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ಸ್ಟಿವರ್ಟ್ ಇರಾನ್ ಸಂಬಂಧಿತ ವಿಷಯಗಳಲ್ಲಿ ಆಳವಾದ ಹಿನ್ನೆಲೆಯನ್ನು ಹೊಂದಿದ್ದು ಈ ಹಿಂದೆ ಟ್ರಂಪ್ ಅವರ ಮೊದಲ ಅಧ್ಯಕ್ಷಾವಧಿಯಲ್ಲಿ ವಿದೇಶಾಂಗ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ ಎಂದು ಹೇಳಿದ್ದಾರೆ.






