ಟ್ರಂಪ್ ವಿರುದ್ಧ ಇರಾನ್ ನಿಂದ ಜಾಹೀರಾತು ಫಲಕದ ಮೂಲಕ ನೇರ ಬೆದರಿಕೆ

Photo Credit : NDTV
ಟೆಹರಾನ್: ಟ್ರಂಪ್ ಚುನಾವಣಾ ಸೋಲಿನ ರಾಜಕೀಯ ಪರಿಣಾಮಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲೇ ಇರಾನ್ ಅಮೆರಿಕ ವಿರುದ್ಧದ ತನ್ನ ಕಟು ಸಂದೇಶವನ್ನು ಮತ್ತಷ್ಟು ತೀವ್ರಗೊಳಿಸಿದೆ.
ಟೆಹ್ರಾನ್ ನ ಜನನಿಬಿಡ ಎಂಘೆಲಾಬ್ ವೃತ್ತದಲ್ಲಿ ಅಳವಡಿಸಲಾಗಿದ್ದ ಬೃಹತ್ ಜಾಹೀರಾತು ಫಲಕದಲ್ಲಿ 'ನಾವು ಟ್ರಂಪ್ ಅವರನ್ನು ಕೊಲ್ಲುತ್ತೇವೆ' ಎಂಬ ನೇರ ಬೆದರಿಕೆ ಹಾಕಲಾಗಿದೆ.
ಈ ಫಲಕದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರನ್ನು ಕಂಬಿಗಳ ಹಿಂದೆ ತಲೆಬಾಗಿಸಿ ನಿಂತಿರುವಂತೆ ಚಿತ್ರಿಸಲಾಗಿದೆ. ಸಮೀಪದಲ್ಲಿದ್ದ ಮತ್ತೊಂದು ಕಲಾಕೃತಿಯಲ್ಲಿ ಟ್ರಂಪ್, ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಚಿತ್ರಿಸಲಾಗಿದೆ. ನಾಲ್ವರ ಮುಖಗಳಲ್ಲಿಯೂ ರಕ್ತದ ಕಲೆಗಳಿದ್ದು, ಅವರ ಸೂಟ್ ಗಳು ಹರಿದಿರುವಂತೆ ತೋರಿಸಲಾಗಿದೆ. ಹಿನ್ನಲೆಯಲ್ಲಿ ಹಾನಿಗೊಳಗಾದ ಅಮೆರಿಕ ಮತ್ತು ಇಸ್ರೇಲ್ ಧ್ವಜಗಳನ್ನು ಪ್ರದರ್ಶಿಸಲಾಗಿದೆ.
ಈ ಪ್ರದರ್ಶನದ ವೇಳೆ ಜನರು ಕೆಂಪು ಧ್ವಜಗಳನ್ನು ಬೀಸಿದ್ದು, 'ರಕ್ತ ಹರಿಯಲಿದೆ' ಎಂಬ ಬರಹವಿರುವ ಬ್ಯಾನರ್ ಗಳನ್ನು ಹಿಡಿದಿದ್ದರು.
ಫೆಬ್ರವರಿ 28ರಂದು ಇರಾನ್ ನ ಮಾಜಿ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಾಮಿನೈ ಅವರನ್ನು ಹತ್ಯೆಗೈದ ಅಮೆರಿಕ-ಇಸ್ರೇಲ್ ದಾಳಿಯ ಬಳಿಕ ಪ್ರತೀಕಾರದ ಸಂದೇಶವಾಗಿ ಈ ಪ್ರದರ್ಶನಗಳನ್ನು ಆಯೋಜಿಸಲಾಗಿದೆ.
ಸಂಘರ್ಷ ಆರಂಭವಾದಾಗಿನಿಂದಲೂ ಟೆಹ್ರಾನ್ ಸಾರ್ವಜನಿಕ ಪ್ರದರ್ಶನಗಳ ಮೂಲಕ ಟ್ರಂಪ್ ಅವರನ್ನು ಅಪಹಾಸ್ಯ ಮಾಡುವುದು ಮತ್ತು ಪ್ರತೀಕಾರದ ಬೆದರಿಕೆ ಹಾಕುವುದನ್ನು ಮುಂದುವರಿಸಿದೆ. ಆದರೆ, ಇತ್ತೀಚಿನ ಫಲಕದಲ್ಲಿ ಅಮೆರಿಕ ಅಧ್ಯಕ್ಷರ ಜೀವಕ್ಕೆ ನೇರವಾಗಿ ಬೆದರಿಕೆ ಹಾಕುವ ಮೂಲಕ ಇರಾನ್ ತನ್ನ ವಾಗ್ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ.






