ಭಾರತ ಸೇರಿ 5 ಮಿತ್ರದೇಶಗಳಿಗೆ ಹಾರ್ಮುಝ್ ಮೂಲಕ ಹಾದುಹೋಗಲು ಅವಕಾಶ: ಇರಾನ್

Photo Credit : AP , PTI
ಹೊಸದಿಲ್ಲಿ, ಮಾ. 26: ಪಶ್ಚಿಮ ಏಶ್ಯ ಸಂಘರ್ಷ ಮುಂದುವರಿದಿರುವಂತೆಯೇ, ಭಾರತ ಸೇರಿದಂತೆ ಆಯ್ದ ಮಿತ್ರ ದೇಶಗಳ ಹಡಗುಗಳಿಗೆ ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗಲು ಅನುಮತಿ ನೀಡುವುದಾಗಿ ಇರಾನ್ ಹೇಳಿದೆ. ಇತರ ದೇಶಗಳ ಮೇಲಿನ ನಿರ್ಬಂಧ ಮುಂದುವರಿಯುವುದು ಎಂದು ಅದು ತಿಳಿಸಿದೆ.
ಸಂಘರ್ಷಪೀಡಿತ ವಲಯದಲ್ಲಿ ಆಂಶಿಕ ನಿರ್ಬಂಧವನ್ನು ಇರಾನ್ ಮುಂದುವರಿಸಿರುವಂತೆಯೇ, ತನ್ನೊಂದಿಗೆ ನಿಕಟ ಸಂಬಂಧ ಹೊಂದಿರುವ ದೇಶಗಳಿಗೆ ಜಲಸಂಧಿಯನ್ನು ತೆರೆದಿದೆ. ಹಾರ್ಮುಝ್ ಜಲಸಂಧಿಯನ್ನು ಹಾದುಹೋಗಲು ಅನುಮತಿ ಪಡೆದಿರುವ ದೇಶಗಳೆಂದರೆ- ಭಾರತ, ರಶ್ಯ, ಚೀನಾ, ಪಾಕಿಸ್ತಾನ ಮತ್ತು ಇರಾಕ್.
ಈ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿಲ್ಲ ಎಂದು ಇರಾನ್ನ ಸರಕಾರಿ ಟೆಲಿವಿಶನ್ಗೆ ನೀಡಿದ ಸಂದರ್ಶನವೊಂದರಲ್ಲಿ ದೇಶದ ವಿದೇಶ ಸಚಿವ ಅಬ್ಬಾಸ್ ಅರಾಗ್ಚಿ ಹೇಳಿದರು. ಈ ಏರ್ಪಾಡಿನ ಪ್ರಯೋಜನವನ್ನು ಭಾರತೀಯ ಹಡಗುಗಳು ಈಗಾಗಲೇ ಪಡೆದುಕೊಂಡಿವೆ ಎಂದು ತಿಳಿಸಿದರು.
‘‘ಹಲವು ಹಡಗುಗಳ ಮಾಲೀಕರು ಅಥವಾ ಈ ಹಡಗುಗಳ ಮಾಲೀಕತ್ವ ಹೊಂದಿರುವ ದೇಶಗಳು ನಮ್ಮನ್ನು ಸಂಪರ್ಕಿಸಿ, ಹೋರ್ಮುಝ್ ಜಲಸಂಧಿಯ ಮೂಲಕ ಸುರಕ್ಷಿತವಾಗಿ ಹಾದು ಹೋಗಲು ಅವಕಾಶ ನೀಡುವಂತೆ ಕೋರಿದ್ದಾರೆ. ಮಿತ್ರ ದೇಶಗಳೆಂದು ನಾವು ಭಾವಿಸುವ ಕೆಲವು ದೇಶಗಳಿಗೆ ಹಾಗೂ ಇತರ ಕಾರಣಗಳಿಗಾಗಿ ವಿನಾಯಿತಿ ನೀಡಲು ನಾವು ನಿರ್ಧರಿಸಿರುವ ದೇಶಗಳಿಗೆ ಸುರಕ್ಷಿತವಾಗಿ ಸಾಗಲು ನಮ್ಮ ಸಶಸ್ತ್ರ ಪಡೆಗಳು ಅವಕಾಶ ನೀಡಿವೆ’’ ಎಂದು ಅರಾಗ್ಚಿ ಹೇಳಿದ್ದಾರೆ.
ಆದರೆ, ‘‘ಶತ್ರು ದೇಶಗಳು’’ ಮತ್ತು ಅವುಗಳ ಮಿತ್ರದೇಶಗಳಿಗೆ ಹಾರ್ಮುಝ್ ಜಲಸಂಧಿಯು ನಿರ್ಬಂಧಿತ ಪ್ರದೇಶವಾಗಿಯೇ ಮುಂದುವರಿಯುತ್ತದೆ ಎಂದು ಅವರು ಹೇಳಿದರು. ಅಮೆರಿಕ, ಇಸ್ರೇಲ್ ಹಾಗೂ ಈ ಸಂಘರ್ಷದಲ್ಲಿ ಒಳಗೊಂಡಿರುವ ಕೆಲವು ಕೊಲ್ಲಿ ದೇಶಗಳ ಹಡಗುಗಳಿಗೆ ಈ ಜಲಸಂಧಿಯನ್ನು ಹಾದು ಹೋಗಲು ಅವಕಾಶ ನೀಡುವುದಿಲ್ಲ ಎಂದು ಅವರು ಘೋಷಿಸಿದರು.







