ಇರಾನ್ ಅರಾಜಕತೆ: ಟ್ರಂಪ್ ಮಧ್ಯಪ್ರವೇಶಕ್ಕೆ ಮಾಜಿ ದೊರೆಯ ಪುತ್ರ ಆಗ್ರಹ

PC: x.com/GlobeEyeNews
ವಾಷಿಂಗ್ಟನ್: ಇರಾನ್ನ ಕೊನೆಯ ಶಾಹ್ ಮೊಹಮ್ಮದ್ ರೆಝಾ ಪಹ್ಲವಿ ಅವರ ಗಡೀಪಾರುಗೊಂಡ ಪುತ್ರ ರೆಝಾ ಪಹ್ಲವಿ ಅವರು, ಇರಾನ್ನಲ್ಲಿ ನಡೆಯುತ್ತಿರುವ ವ್ಯಾಪಕ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಶುಕ್ರವಾರ ಸಂಪರ್ಕಿಸಿ ತಕ್ಷಣ ಮಧ್ಯಪ್ರವೇಶಿಸುವಂತೆ ಆಗ್ರಹಿಸಿದ್ದಾರೆ.
ಇರಾನ್ನಲ್ಲಿ ನಡೆಯುತ್ತಿರುವ ಸ್ಥಿತಿಗತಿಗಳನ್ನು ವಿವರಿಸಿದ ಪಹ್ಲವಿ, ದೇಶದಲ್ಲಿ ಇಂಟರ್ನೆಟ್ ಹಾಗೂ ಲ್ಯಾಂಡ್ಲೈನ್ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದ್ದು, ಪ್ರತಿಭಟನಾಕಾರರು ಗುಂಡೇಟು ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಟ್ರಂಪ್ ಅವರ “ತುರ್ತು ಮತ್ತು ತಕ್ಷಣದ ಗಮನ, ಬೆಂಬಲ ಹಾಗೂ ಕ್ರಮ”ಕ್ಕೆ ಮನವಿ ಮಾಡಿದ್ದಾರೆ.
“ಮಾನ್ಯ ಅಧ್ಯಕ್ಷರೇ, ಇದು ನಿಮ್ಮ ಗಮನ, ಬೆಂಬಲ ಮತ್ತು ಕ್ರಮಕ್ಕೆ ಮಾಡುತ್ತಿರುವ ತುರ್ತು ಹಾಗೂ ತಕ್ಷಣದ ಕರೆ. ನಿನ್ನೆ ರಾತ್ರಿ ಲಕ್ಷಾಂತರ ಸಾಹಸಿ ಇರಾನಿಗರು ಬೀದಿಗಿಳಿದು ಗುಂಡುಗಳನ್ನು ಎದುರಿಸುತ್ತಿರುವುದನ್ನು ನೀವು ನೋಡಿರಬಹುದು. ಇಂದು ಅವರು ಗುಂಡೇಟು ಮಾತ್ರವಲ್ಲದೆ, ಸಂಪೂರ್ಣ ಸಂಪರ್ಕ ನಿಷೇಧವನ್ನೂ ಎದುರಿಸುತ್ತಿದ್ದಾರೆ. ಇಂಟರ್ನೆಟ್ ಇಲ್ಲ, ದೂರವಾಣಿ ಸಂಪರ್ಕವೂ ಇಲ್ಲ,” ಎಂದು ಅವರು ಎಕ್ಸ್ನಲ್ಲಿ ಬರೆದಿದ್ದಾರೆ.
“ಜನರ ಕೈಯಲ್ಲಿ ತನ್ನ ಆಡಳಿತ ಅಂತ್ಯವಾಗಲಿದೆ ಎಂಬ ಭೀತಿಯಿಂದ, ಅಲಿ ಖಮೇನಿಯವರು ಜನರ ಮೇಲೆ ಕ್ರೂರ ದಮನದ ಬೆದರಿಕೆ ಒಡ್ಡಿದ್ದಾರೆ. ಪ್ರತಿಭಟನಾಕಾರರನ್ನು ಬೆಂಬಲಿಸುವ ನಿಮ್ಮ ಬಲಿಷ್ಠ ಘೋಷಣೆಯೇ ಆಡಳಿತವನ್ನು ಆತಂಕಕ್ಕೀಡು ಮಾಡಿದೆ. ಈ ಯುವ ಹೀರೊಗಳನ್ನು ಹತ್ಯೆ ಮಾಡಲು ಸಂಪರ್ಕ ನಿಷೇಧವನ್ನು ಅವರು ಬಳಸುತ್ತಿದ್ದಾರೆ,” ಎಂದು ಆರೋಪಿಸಿದ್ದಾರೆ.
ಇರಾನ್ ಜನರು ಮತ್ತೊಮ್ಮೆ ಬೀದಿಗಿಳಿದು ಪ್ರತಿಭಟನೆ ನಡೆಸಲಿದ್ದು, “ಸಮಯ ಅತ್ಯಂತ ಅಮೂಲ್ಯವಾಗಿದೆ” ಎಂದು ಹೇಳಿ ಟ್ರಂಪ್ ಅವರನ್ನು ತಕ್ಷಣ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ.
“ನಾನು ಜನರನ್ನು ಸ್ವಾತಂತ್ರ್ಯಕ್ಕಾಗಿ ಹೋರಾಡಲು ಬೀದಿಗೆ ಕರೆತಂದಿದ್ದೇನೆ. ಭಾರಿ ಸಂಖ್ಯೆಯಲ್ಲಿ ಬೀದಿಗಿಳಿದು ಭದ್ರತಾ ಪಡೆಗಳನ್ನು ಮಣಿಸಲು ಅವರು ನಿನ್ನೆ ಯಶಸ್ವಿಯಾಗಿದ್ದಾರೆ. ನಿಮ್ಮ ಎಚ್ಚರಿಕೆಯೇ ಆಡಳಿತದ ಪಡೆಗಳನ್ನು ಹಿಂದೆ ಸರಿಯುವಂತೆ ಮಾಡಿದೆ. ಆದರೆ ಸಮಯ ಅತ್ಯಂತ ಮುಖ್ಯ. ಜನರು ಮತ್ತೆ ಬೀದಿಗಿಳಿಯಲಿದ್ದಾರೆ. ದಯವಿಟ್ಟು ಅವರಿಗೆ ಸಹಾಯ ಮಾಡಿ,” ಎಂದು ಅವರು ಹೇಳಿದ್ದಾರೆ.
“ನೀವು ಶಾಂತಿಯ ನಾಯಕ ಹಾಗೂ ನಿಮ್ಮ ಮಾತಿಗೆ ಬದ್ಧರಾಗಿರುವ ವ್ಯಕ್ತಿ ಎಂದು ನಾನು ನಂಬಿದ್ದೇನೆ. ಇರಾನ್ ಜನರ ರಕ್ಷಣೆಗೆ ಮಧ್ಯಪ್ರವೇಶಿಸಲು ದಯವಿಟ್ಟು ಸಿದ್ಧರಾಗಿ,” ಎಂದು ರೆಝಾ ಪಹ್ಲವಿ ಅವರು ತಮ್ಮ ಸಂದೇಶದಲ್ಲಿ ಆಗ್ರಹಿಸಿದ್ದಾರೆ.







