ಇರಾನ್: ನ್ಯಾಯಾಂಗ ಕೇಂದ್ರದ ಮೇಲೆ ದಾಳಿಯಲ್ಲಿ ಕನಿಷ್ಠ 8 ಮಂದಿ ಸಾವು

PC : X
ಟೆಹ್ರಾನ್, ಜು.26: ಆಗ್ನೇಯ ಇರಾನಿನಲ್ಲಿ ನ್ಯಾಯಾಂಗ ಕಟ್ಟಡವನ್ನು ಗುರಿಯಾಗಿಸಿ ನಡೆದ `ಭಯೋತ್ಪಾದಕ ದಾಳಿ'ಯಲ್ಲಿ ಐವರು ನಾಗರಿಕರು ಹಾಗೂ ಮೂವರು ದಾಳಿಕೋರರ ಸಹಿತ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದು ಇತರ 8 ಮಂದಿ ಗಾಯಗೊಂಡಿರುವುದಾಗಿ ಸರ್ಕಾರಿ ಸ್ವಾಮ್ಯದ ಮಾಧ್ಯಮ ಶನಿವಾರ ವರದಿ ಮಾಡಿದೆ.
ಅಜ್ಞಾತ ಬಂದೂಕುಧಾರಿಗಳು ಆಗ್ನೇಯ ಸಿಸ್ತಾನ್ ಬಲೂಚಿಸ್ತಾನ್ ಪ್ರಾಂತದ ರಾಜಧಾನಿ ಝಹೆದನ್ ನಲ್ಲಿರುವ ನ್ಯಾಯಾಂಗ ಕೇಂದ್ರದ ನ್ಯಾಯಾಧೀಶರ ಕೋಣೆಯೊಳಗೆ ನುಗ್ಗಿದ್ದಾರೆ. ಈ ಸಂದರ್ಭ ನಡೆದ ಗುಂಡಿನ ದಾಳಿಯಲ್ಲಿ ಐವರು ಸಾವನ್ನಪ್ಪಿದ್ದು ಇತರ 13 ಮಂದಿ ಗಾಯಗೊಂಡಿದ್ದಾರೆ. ಬಳಿಕ ಭದ್ರತಾ ಪಡೆಗಳ ಪ್ರತಿದಾಳಿಯಲ್ಲಿ ಮೂವರು ದಾಳಿಕೋರರೂ ಹತರಾಗಿದ್ದಾರೆ. ದಾಳಿಕೋರರಲ್ಲಿ ಒಬ್ಬ ಆತ್ಮಹತ್ಯಾ ಬಾಂಬರ್ ಆಗಿರುವ ಸಾಧ್ಯತೆಯಿದೆ ಎಂದು ಸರ್ಕಾರಿ ಸ್ವಾಮ್ಯದ `ಇರ್ನಾ' ಸುದ್ದಿಸಂಸ್ಥೆ ವರದಿ ಮಾಡಿದೆ. ವರದಿಗಳ ಪ್ರಕಾರ ಸುನ್ನಿ ಉಗ್ರಗಾಮಿ ಗುಂಪು ಜೈಷ್ ಅಲ್-ಅಡ್ಲ್ ದಾಳಿಯ ಹೊಣೆ ವಹಿಸಿಕೊಂಡಿದೆ. ದಾಳಿಕೋರರು ಸಂದರ್ಶಕರಂತೆ ವೇಷ ಮರೆಸಿಕೊಂಡು ನ್ಯಾಯಾಧೀಶರ ಕೋಣೆಯೊಳಗೆ ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಭದ್ರತಾ ಸಿಬ್ಬಂದಿ ತಡೆದಾಗ ಕಟ್ಟಡದತ್ತ ಗ್ರೆನೇಡ್ ಎಸೆದಿದ್ದಾರೆ. ಮೃತರಲ್ಲಿ ಒಂದು ವರ್ಷದ ಮಗು ಹಾಗೂ ಅದರ ತಾಯಿಯೂ ಸೇರಿದ್ದಾರೆ ಎಂದು ಸಿಸ್ತಾನ್ ಬಲೂಚಿಸ್ತಾನ್ ಪ್ರಾಂತದ ಪೊಲೀಸ್ ಅಧಿಕಾರಿ ಅಲಿರೆಜಾ ದಲಿರಿ ಹೇಳಿದ್ದಾರೆ.





