ಅಮೆರಿಕದ ದಾಳಿಗೆ ಪ್ರತಿಯಾಗಿ ಬಹ್ರೇನ್, ಕುವೈತ್, ಜೋರ್ಡಾನ್ ನಲ್ಲಿನ US ನೆಲೆಯನ್ನು ಗುರಿಯಾಗಿಸಿ ದಾಳಿ : IRGC ಮಾಹಿತಿ

ಸಾಂದರ್ಭಿಕ ಚಿತ್ರ (X/@RT_India_news)
ಕುವೈತ್ : ಹಾರ್ಮುಝ್ ಜಲಸಂಧಿಯಲ್ಲಿರುವ ಇರಾನಿನ ಬಂದರುಗಳು ಮತ್ತು ದ್ವೀಪಗಳ ಮೇಲೆ ಅಮೆರಿಕದ ದಾಳಿಗೆ ಪ್ರತಿಕಾರವಾಗಿ, ಬಹ್ರೇನ್, ಕುವೈತ್ ಮತ್ತು ಜೋರ್ಡಾನ್ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿರುವುದಾಗಿ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್(IRGC) ಹೇಳಿಕೊಂಡಿದೆ.
ಬಹ್ರೇನ್ನಲ್ಲಿರುವ ಅಮೆರಿಕದ ನೌಕಾ ನೆಲೆ ಮತ್ತು ಕುವೈತ್ನಲ್ಲಿರುವ ಅಲಿ ಅಲ್ ಸಲೇಮ್ ವಾಯುನೆಲೆ ಮತ್ತು ಜೋರ್ಡಾನ್ನ ಅಝ್ರಾಕ್ನಲ್ಲಿರುವ ವಾಯುನೆಲೆಯ ಮೇಲೆ ದೀರ್ಘ-ಶ್ರೇಣಿಯ ಕ್ಷಿಪಣಿ ದಾಳಿ ನಡೆಸಿರುವುದಾಗಿ IRGC ತಿಳಿಸಿದೆ.
ಇದಲ್ಲದೆ ಇರಾನ್ ವಾಯುಪ್ರದೇಶದಲ್ಲಿ ಅಮೆರಿಕದ MQ-9 ಡ್ರೋನ್ ಅನ್ನು ಹೊಡೆದುರುಳಿಸಿರುವುದಾಗಿ ಐಆರ್ಜಿಸಿ ಹೇಳಿದೆ.
ಅಪಾಚೆ ಹೆಲಿಕಾಪ್ಟರ್ ಉರುಳಿಸಿದ ಬೆನ್ನಲ್ಲೇ ಇರಾನ್ ಮೇಲೆ ಅಮೆರಿಕ ದಾಳಿಯನ್ನು ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಐಆರ್ಜಿಸಿ ದಾಳಿಯನ್ನು ನಡೆಸಿದೆ.
ಅಝ್ರಾಕ್ ಕಡೆಗೆ ಹಾರಿಸಲಾದ ಐದು ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ ಎಂದು ಜೋರ್ಡಾನ್ ಮಿಲಿಟರಿ ತಿಳಿಸಿದೆ. ಇರಾನ್ ದಾಳಿಯಿಂದ ಬಹ್ರೇನ್, ಕುವೈತ್ನಲ್ಲಿ ಎಚ್ಚರಿಕೆಯ ಸೈರನ್ಗಳನ್ನು ನೀಡಲಾಗುತ್ತಿದೆ ಎಂದು ವರದಿಯಾಗಿದೆ.






