ಇರಾನ್ ನಲ್ಲಿ ಅವಳಿ ಸ್ಫೋಟ: ಕನಿಷ್ಠ 100 ಮಂದಿ ಬಲಿ
170ಕ್ಕೂ ಅಧಿಕ ಮಂದಿಗೆ ಗಾಯ; ಹತ್ಯೆಯಾದ ಸೇನಾ ಜನರಲ್ ಖಾಸಿಂ ಸುಲೈಮಾನಿ ಸಮಾಧಿ ಬಳಿ ಬಾಂಬ್ ದಾಳಿ

Photo : twitter
ಟೆಹರಾನ್ : ದಕ್ಷಿಣ ಇರಾನಿನ ನಗರವಾದ ಕೆರ್ಮಾನ್ ನಲ್ಲಿ ಇರಾನಿನ ಉನ್ನತ ಸೇನಾಪಡೆಯಾದ ಇಸ್ಲಾಮಿಕ್ ರೆವೆಲ್ಯೂಶನರಿ ಗಾರ್ಡ್ಸ್ ಕಾರ್ಪ್ಸ್ (ಐಆರ್ಜಿಸಿ)ನ ಜನರಲ್ ಖಾಸಿಂ ಸುಲೈಮಾನಿ ಅವರ ಸಮಾಧಿಯ ಸಮೀಪ ಬುಧವಾರ ಸಂಭವಿಸಿದ ಅವಳಿ ಸ್ಫೋಟಗಳಲ್ಲಿ ಕನಿಷ್ಠ 100 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 170ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
2020ರಲ್ಲಿ ಹತ್ಯೆಯಾದ ಖಾಸಿಂ ಸುಲೈಮಾನಿ ಅವರ ಸಾವಿನ ವರ್ಷಾಚರಣೆಯ ದಿನವಾದ ಬುಧವಾರ ಕೆರ್ಮಾನ್ ನಲ್ಲಿರುವ ಅವರ ಸಮಾಧಿ ಸ್ಥಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಎರಡು ಬಾಂಬ್ ಗಳು ಒಂದರ ಹಿಂದೆ ಒಂದರಂತೆ ಸ್ಪೋಟಿಸಿರುವುದಾಗಿ ಸರಕಾರಿ ಸ್ವಾಮ್ಯದ ಟಿವಿ ವಾಹಿನಿಯೊಂದು ವರದಿ ಮಾಡಿದೆ.
ಇದೊಂದು ಭಯೋತ್ಪಾದಕ ದಾಳಿಯೆಂದು ಇರಾನಿನ ಅಧಿಕಾರಿಗಳು ತಿಳಿಸಿದ್ದಾರೆ. ಅವಳಿ ಸ್ಫೋಟದಲ್ಲಿ 100 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 170ಕ್ಕೂ ಅಧಿಕ ಮಂದಿಯನ್ನು ವೈದ್ಯಕೀಯ ಕೇಂದ್ರಗಳಿಗೆ ವರ್ಗಾಯಿಸಲಾಗಿದೆ ಎಂದು ಇರಾನ್ ಅಧಿಕೃತ ಸುದ್ದಿಸಂಸ್ಥೆ ಇರ್ನಾ ವರದಿ ಮಾಡಿದೆ.
ಸ್ಫೋಟದ ಬಳಿಕ ಹಲವಾರು ಆ್ಯಂಬುಲೆನ್ಸ್ ಗಳು ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸುತ್ತಿರುವ ದೃಶ್ಯಗಳನ್ನು ಸರಕಾರಿ ಸುದ್ದಿವಾಹಿನಿಯು ಪ್ರಸಾರ ಮಾಡಿದೆ. ಸ್ಥಳದಲ್ಲಿ ಬ್ಯಾಗ್ ಗಳಲ್ಲಿ ಒಯ್ಯುತ್ತಿದ್ದ ಬಾಂಬ್ ಗಳು ಸ್ಫೋಟಗೊಂಡಿರುವುದಾಗಿ ಇರಾನಿನ ತ್ಸಾನಿಮ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಇರಾನಿನ ಇಸ್ಲಾಮಿಕ್ ರೆವೆಲ್ಯೂಶನರಿ ಗಾರ್ಡ್ಸ್ ಕಾರ್ಪ್ಸ್ ನ ವಿದೇಶ ಕಾರ್ಯಾಚರಣೆಗಳ ಘಟಕವಾದ ಕ್ವುಡ್ಸ್ ಫೋರ್ಸಿನ ನೇತೃತ್ವವನ್ನು ಸುಲೈಮಾನಿ ವಹಿಸಿದ್ದರು. ಮಧ್ಯಪ್ರಾಚ್ಯದಾದ್ಯಂತ ನಡೆಯುತ್ತಿರುವ ಸೇನಾ ಕಾರ್ಯಾಚರಣೆಗಳ ಮೇಲ್ವಿಚಾರಣೆಯನ್ನು ಅವರು ನಿರ್ವಹಿಸುತ್ತಿದ್ದರು.
2020ರಲ್ಲಿ ಇರಾಕಿನ ಬಾಗ್ದಾದ್ ವಿಮಾನನಿಲ್ದಾಣದ ಹೊರಭಾಗದಲ್ಲಿ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಸುಲೈಮಾನಿ ಹತ್ಯೆಯಾಗಿದ್ದರು.







