ಹಾರ್ಮುಝ್ ಜಲಸಂಧಿ ತಡೆದ ಇರಾನ್: ತೈಲ ಬೆಲೆ ಮತ್ತೆ ಗಗನಕ್ಕೆ

ಸಾಂದರ್ಭಿಕ ಚಿತ್ರ (AI)
ಟೆಹರಾನ್: ಮಧ್ಯಪ್ರಾಚ್ಯದಲ್ಲಿ ಕದನ ವಿರಾಮದ ಗಡುವು ಸಮೀಪಿಸುತ್ತಿರುವಂತೆಯೇ ಮತ್ತೆ ಸಂಘರ್ಷದ ದಟ್ಟ ಕಾರ್ಮೋಡ ಕವಿದಿದ್ದು, ಅನಿಶ್ಚಿತ ಪರಿಸ್ಥಿತಿಯಲ್ಲಿ ತೈಲ ಬೆಲೆ ಮತ್ತೆ ಗಗನಕ್ಕೇರಿದೆ. ಹಾರ್ಮುಝ್ ಜಲಸಂಧಿಯನ್ನು ಇರಾನ್ ಮತ್ತೆ ತಡೆದಿದೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ಕಚ್ಚಾತೈಲದ ಬೆಲೆ ಶೇಕಡ 7ರಷ್ಟು ಏರಿಕೆ ಕಂಡಿದೆ.
ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಗೆ ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನ ಇನ್ನೊಂದು ಸುತ್ತಿನ ಮಾತುಕತೆಗೆ ಸಜ್ಜಾಗುತ್ತಿದ್ದು, ಇರಾನ್ ಬಂದರುಗಳ ಮೇಲೆ ಅಮೆರಿಕ ನೌಕಾಪಡೆ ವಿಧಿಸಿರುವ ದಿಗ್ಬಂಧನ ತೆರವುಗೊಳಿಸಿದರೆ ಮಾತ್ರ ಮಾತುಕತೆ ಮುಂದುವರಿಸುವುದಾಗಿ ಇರಾನ್ ಸ್ಪಷ್ಟಪಡಿಸಿದೆ.
ರವಿವಾರ ಬ್ರೆಂಟ್ ಕಚ್ಚಾತೈಲದ ಬೆಲೆ ಶೇಕಡ 7ರಷ್ಟು ಏರಿಕೆ ಕಂಡು ಪ್ರತಿ ಬ್ಯಾರೆಲ್ ಗೆ 96.88 ಡಾಲರ್ ಆಗಿದ್ದು, ಅಮೆರಿಕದ ಕಚ್ಚಾತೈಲ ಬೆಲೆ ಶೇಕಡ 7ರ ಹೆಚ್ಚಳ ದಾಖಲಿಸಿ 90.33 ಡಾಲರ್ ಗೆ ಏರಿದೆ. ಹಾರ್ಮುಝ್ ಜಲಸಂಧಿ ಸದ್ಯೋಭವಿಷ್ಯದಲ್ಲಿ ತೆರವುಗೊಳ್ಳುವ ಸಾಧ್ಯತೆ ಇಲ್ಲ ಎಂಬ ಭೀತಿಯಿಂದ ಕಚ್ಚಾತೈಲ ಬೆಲೆಯಲ್ಲಿ ಹೆಚ್ಚಳವಾಗಿದೆ.
ಅಮೆರಿಕ ವಿಶ್ವಾಸದ್ರೋಹ ಎಸಗಿರುವ ಕಾರಣಕ್ಕೆ ಹಾರ್ಮುಝ್ ಜಲಸಂಧಿಯನ್ನು ಮುಚ್ಚಲಾಗಿದೆ ಎಂದು ಇರಾನ್ ಸ್ಪಷ್ಟಪಡಿಸಿದೆ. ಒಮಾನ್ ಕೊಲ್ಲಿಯಲ್ಲಿ ಇರಾನ್ ನ ಸರಕು ಸಾಗಾಣಿಕೆ ಹಡಗಿನ ಮೇಲೆ ಅಮೆರಿಕದ ನೌಕಾಪಡೆ ದಾಳಿ ನಡೆಸಿ ವಶಪಡಿಸಿಕೊಂಡ ಬಳಿಕ ಉಭಯ ದೇಶಗಳ ನಡುವಿನ ಸಂಘರ್ಷ ತಾರಕಕ್ಕೇರಿದೆ. ಈ ಹಿಂದೆ ಮಾಡಿಕೊಂಡ ಕದನ ವಿರಾಮ ಒಪ್ಪಂದ ಬುಧವಾರ ಕೊನೆಗೊಳ್ಳುತ್ತಿರುವುದು ಅನಿಶ್ಚಿತತೆ ಮತ್ತಷ್ಟು ಹೆಚ್ಚಲು ಕಾರಣವಾಗಿದೆ.






