ಇರಾನ್ ಯುದ್ಧ ಗೆಲ್ಲಲಾರದು; ಕಾಲ ಮಿಂಚುವ ಮುನ್ನ ಮಾತುಕತೆ ಅನಿವಾರ್ಯ: ಟ್ರಂಪ್

PC: x.com/Ekwulu
ವಾಷಿಂಗ್ಟನ್: ಕೆನಡಾದ ಕನನಸ್ಕೀಸ್ ರಾಕೀಸ್ ರೆಸಾರ್ಟ್ನಲ್ಲಿ ಜಿ-7 ವಾರ್ಷಿಕ ಶೃಂಗಸಭೆಗೆ ಮುನ್ನ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಜತೆ ಸಂಘರ್ಷಕ್ಕೆ ಇಳಿದಿರುವ ಇಸ್ರೇಲ್ ಗೆ ಬೆಂಬಲವನ್ನು ಪುನರುಚ್ಚರಿಸಿದ್ದಾರೆ. ಇಸ್ರೇಲ್ ಜತೆಗಿನ ಸಂಘರ್ಷದಲ್ಲಿ ಇರಾನ್ ಯುದ್ಧ ಗೆಲ್ಲಲಾರದು; ಆದ್ದರಿಂದ ಕಾಲ ಮಿಂಚುವ ಮುನ್ನ ಅವರು ಸಂಧಾನ ಮಾತುಕತೆಗೆ ಮುಂದಾಗಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ಇಸ್ರೇಲ್ ಮತ್ತು ಇರಾನ್ ಮಧ್ಯೆ ಸಂಧಾನ ಮಾತುಕತೆಗೆ ಮಧ್ಯಸ್ಥಿಕೆ ವಹಿಸಲು ತಾವು ಸಿದ್ಧ ಎಂಬ ಹೇಳಿಕೆ ನೀಡಿದ ಮರುದಿನ ಟ್ರಂಪ್ ಈ ಹೇಳಿಕೆನೀಡಿದ್ದಾರೆ. ಜಿ-7 ಶೃಂಗಸಭೆಗೆ ಹೊರಡುವ ಮುನ್ನ ಮಾತನಾಡಿದ ಟ್ರಂಪ್, ಇಸ್ರೇಲ್ ನ ಸುರಕ್ಷತೆಯ ದೃಷ್ಟಿಯಿಂದ ಅಮೆರಿಕ ಆ ದೇಶವನ್ನು ಬೆಂಬಲಿಸುತ್ತದೆ ಎಂದು ಪುನರುಚ್ಚರಿಸಿದರು.
ಇರಾನ್ ಮೇಲೆ ಇಸ್ರೇಲ್ ವಾಯುದಾಳಿ ನಡೆಸುವ ಬಗ್ಗೆ ಅಮೆರಿಕದ ಆಡಳಿತ ವ್ಯವಸ್ಥೆಗೆ ಮೊದಲೇ ತಿಳಿದಿತ್ತು ಎಂದು ಶುಕ್ರವಾರ ರಾಯ್ಟರ್ಸ್ ಜತೆ ನಡೆದ ದೂರವಾಣಿ ಸಂದರ್ಶನದಲ್ಲಿ ಟ್ರಂಪ್ ಬಹಿರಂಗಪಡಿಸಿದ್ದರು. ಇರಾನ್ ನ ಪ್ರಮುಖ ಮಿಲಿಟರಿ ಮತ್ತು ಅಣುಸ್ಥಾವರಗಳ ಮೇಲೆ ನಡೆಸಿದ ದಾಳಿಯನ್ನು "ಅದ್ಭುತ" ಮತ್ತು "ಅತ್ಯಂತ ಯಶಸ್ವಿ" ಎಂದು ಬಣ್ಣಿಸಿದ್ದರು. ಕಾಲ ಮಿಂಚುವ ಮುನ್ನ ಇರಾನ್ ಅಣ್ವಸ್ತ್ರ ಯೋಜನೆ ಬಗ್ಗೆ ಸಂಧಾನ ಮಾತುಕತೆಗೆ ಮರಳುವುದು ಅನಿವಾರ್ಯ ಎಂದು ಪ್ರತಿಪಾದಿಸಿದ್ದರು.
"ನಮಗೆ ಪ್ರತಿಯೊಂದೂ ತಿಳಿದಿದೆ. "ಅವಮಾನ ಮತ್ತು ಸಾವಿನಿಂದ ಇರಾನ್ ದೇಶವನ್ನು ರಕ್ಷಿಸಲು ನಾನು ಪ್ರಯತ್ನ ಮಾಡಿದ್ದೇನೆ. ಒಪ್ಪಂದ ಯಶಸ್ವಿಯಾಗಬೇಕು ಎಂಬ ಬಗ್ಗೆ ಒಲವು ಹೊಂದಿರುವ ಕಾರಣದಿಂದ ನಾನು ಕಠಿಣ ಪರಿಶ್ರಮ ಹಾಕಿದೆ" ಎಂದು ಹೇಳಿದ್ದರು.
ಬ್ರಿಟನ್, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಯೂರೋಪಿಯನ್ ಒಕ್ಕೂಟ ಜಾಗತಿಕ ಸಂಘರ್ಷಗಳ ಬಗ್ಗೆ ಒಮ್ಮತಕ್ಕೆ ಬರುವ ಪ್ರಯತ್ನದಲ್ಲಿವೆ. ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಶಮನಕ್ಕೆ ಕರೆ ನೀಡುವ ಜಂಟಿ ಹೇಳಿಕೆಯನ್ನು ಒಪ್ಪಿಕೊಳ್ಳಲು ಟ್ರಂಪ್ ನಿರಾಕರಿಸಿದ್ದಾರೆ.







