ಪರಮಾಣು ವಿಷಯದ ಕುರಿತು ಪ್ರಸ್ತುತ ಅಮೆರಿಕ ಜತೆ ಮಾತುಕತೆಯಿಲ್ಲ: ಇರಾನ್ ಸ್ಪಷ್ಟನೆ

Photo Credit : PTI
ಟೆಹರಾನ್, ಜೂ. 1: ದೇಶದ ಪರಮಾಣು ಕಾರ್ಯಕ್ರಮದ ಕುರಿತ ವಿವರಗಳನ್ನು ಪ್ರಸ್ತುತ ಅಮೆರಿಕದೊಂದಿಗೆ ವಿನಿಮಯ ಮಾಡಿಕೊಳ್ಳುವುದಿಲ್ಲ ಎಂದು ಇರಾನ್ ವಿದೇಶಾಂಗ ಇಲಾಖೆ ಸೋಮವಾರ ಸ್ಪಷ್ಟಪಡಿಸಿದೆ.
‘ಪರಮಾಣು ವಿಷಯಗಳ ಬಗ್ಗೆ ಯಾವಾಗ ಕಾರ್ಯ ನಿರ್ವಹಿಸಬೇಕು ಎಂಬುದು ನಮಗೆ ತಿಳಿದಿದೆ. ಪರಮಾಣು ವಿಷಯಕ್ಕೆ ಸಂಬಂಧಿಸಿದ ವಿವರಗಳ ಬಗ್ಗೆ ಈಗ ಯಾವುದೇ ಮಾತುಕತೆ ನಡೆದಿಲ್ಲ. ಯುದ್ಧವನ್ನು ಕೊನೆಗೊಳಿಸುವುದು ನಮ್ಮ ಆದ್ಯತೆಯಾಗಿದೆ’ ಎಂದು ಇರಾನ್ ವಿದೇಶಾಂಗ ಇಲಾಖೆಯ ವಕ್ತಾರ ಇಸ್ಮಾಯಿಲ್ ಬಖೈ ಹೇಳಿದ್ದಾರೆ.
ಇರಾನ್ ನ ಪರಮಾಣು ಕಾರ್ಯಕ್ರಮ ಮತ್ತು ಸಂವರ್ಧಿತ ಯುರೇನಿಯಂ ದಾಸ್ತಾನಿನ ಭವಿಷ್ಯವು ಯುದ್ಧ ಆರಂಭವಾದ ಬಳಿಕದಿಂದಲೇ ಎರಡು ರಾಷ್ಟ್ರಗಳ ನಡುವಿನ ವಿವಾದದ ಪ್ರಮುಖ ಅಂಶವಾಗಿದೆ. ಸಂವರ್ಧಿತ ಯುರೇನಿಯಂ ಅನ್ನು ಅಮೆರಿಕಕ್ಕೆ ಹಸ್ತಾಂತರಿಸಬೇಕೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಟ್ಟು ಹಿಡಿದಿದ್ದಾರೆ. ಆದರೆ ದೇಶದ ಹಕ್ಕುಗಳನ್ನು ಗೌರವಿಸದಿದ್ದರೆ ಶಾಂತಿ ಒಪ್ಪಂದ ಸಾಧ್ಯವಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ.
ಈ ಮಧ್ಯೆ, ಅಮೆರಿಕ ಮತ್ತು ಇಸ್ರೇಲ್ ಈ ಪ್ರದೇಶದಲ್ಲಿ ಪದೇ ಪದೇ ಕದನ ವಿರಾಮವನ್ನು ಉಲ್ಲಂಘಿಸುತ್ತಿವೆ ಎಂದು ಇರಾನ್ ಸೋಮವಾರ ಆರೋಪಿಸಿದೆ. ಅಮೆರಿಕದೊಂದಿಗಿನ ಯಾವುದೇ ಒಪ್ಪಂದವೂ ಲೆಬನಾನ್ ನಲ್ಲಿನ ಹೋರಾಟವನ್ನು ಸ್ಥಗಿತಗೊಳಿಸಬೇಕು ಎಂದು ಅದು ಒತ್ತಾಯಿಸಿದೆ.
‘ಇರಾನ್ ಮತ್ತು ಅಮೆರಿಕ ನಡುವಿನ ಕದನ ವಿರಾಮವು ನಿಸ್ಸಂದಿಗ್ಧವಾಗಿ ಲೆಬನಾನ್ ಸೇರಿದಂತೆ ಎಲ್ಲ ರಂಗಗಳಿಗೂ ಅನ್ವಯಿಸುತ್ತದೆ. ಒಂದು ಕ್ಷೇತ್ರದಲ್ಲಿ ಅದನ್ನು ಉಲ್ಲಂಘಿಸಿದರೂ ಅದು ಸಂಪೂರ್ಣ ಉಲ್ಲಂಘನೆಯಾಗುತ್ತದೆ. ಯಾವುದೇ ಉಲ್ಲಂಘನೆಯ ಪರಿಣಾಮಗಳಿಗೆ ಅಮೆರಿಕ ಮತ್ತು ಇಸ್ರೇಲ್ ಸಂಪೂರ್ಣ ಜವಾಬ್ದಾರರಾಗಿರುತ್ತಾರೆ’ ಎಂದು ಇರಾನ್ ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಎಚ್ಚರಿಸಿದ್ದಾರೆ.
ನಡೆಯುತ್ತಿರುವ ರಾಜತಾಂತ್ರಿಕ ಪ್ರಯತ್ನಗಳ ಹೊರತಾಗಿಯೂ ಅಮೆರಿಕ ಮತ್ತು ಇಸ್ರೇಲ್ ಎರಡೂ ಮಿಲಿಟರಿ ಕ್ರಮಗಳನ್ನು ಮುಂದುವರಿಸುತ್ತಿವೆ. ಅಮೆರಿಕ ಪದೇ ಪದೇ ತನ್ನ ನಿಲುವನ್ನು ಬದಲಾಯಿಸುತ್ತಿದ್ದು, ಹೊಸ ಅಥವಾ ಪರಸ್ಪರ ವಿರೋಧಾತ್ಮಕ ಷರತ್ತುಗಳನ್ನು ಮುಂದಿಡುತ್ತಿದೆ. ಇದು ಸ್ವಾಭಾವಿಕವಾಗಿ ಮಾತುಕತೆಗಳನ್ನು ದೀರ್ಘಗೊಳಿಸುತ್ತಿದೆ ಎಂದು ಇರಾನ್ ವಿದೇಶಾಂಗ ಇಲಾಖೆಯ ವಕ್ತಾರ ಇಸ್ಮಾಯಿಲ್ ಬಖೈ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
‘ಅಮೆರಿಕವು ನಮ್ಮ ಪ್ರದೇಶದಲ್ಲಿ ಕದನ ವಿರಾಮವನ್ನು ವ್ಯಾಪಕವಾಗಿ ಉಲ್ಲಂಘಿಸಿದ್ದು, ಇರಾನ್ನಿಂದ ಪ್ರತೀಕಾರ ಕ್ರಮವನ್ನು ಪ್ರಚೋದಿಸುವ ಆಕ್ರಮಣಕಾರಿ ಮಿಲಿಟರಿ ಕ್ರಮಗಳನ್ನು ನಡೆಸುತ್ತಿದೆ. ಯುದ್ಧವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿರುವ ಯಾವುದೇ ಒಪ್ಪಂದಕ್ಕೆ ಲೆಬನಾನ್ ನಲ್ಲಿ ಕದನ ವಿರಾಮ ಅತ್ಯಗತ್ಯ’ ಎಂದು ಬಖೈ ಪ್ರತಿಪಾದಿಸಿದ್ದಾರೆ.
ಇರಾನ್ ನ ಪರಮಾಣು ಕಾರ್ಯಕ್ರಮದ ಕುರಿತು ಅಮೆರಿಕದೊಂದಿಗಿನ ಮಾತುಕತೆಗಳು ಸ್ಥಗಿತಗೊಂಡಿರುವಂತೆಯೇ, ವ್ಯಾಪಕ ಪ್ರಾದೇಶಿಕ ಒಪ್ಪಂದದ ಭಾಗವಾಗಿ ಲೆಬನಾನ್ ನಲ್ಲಿನ ಹೋರಾಟವನ್ನು ನಿಲ್ಲಿಸಬೇಕೆಂದು ಇರಾನ್ ಪದೇ ಪದೇ ಒತ್ತಾಯಿಸುತ್ತಿದೆ.






