ವಾಣಿಜ್ಯ ಹಡಗುಗಳ ಅಪಹರಣದಲ್ಲಿ ಇರಾನ್ ನಿಕಟ ಪಾತ್ರ ವಹಿಸಿದೆ: ಅಮೆರಿಕ ಆರೋಪ

ಸಾಂದರ್ಭಿಕ ಚಿತ್ರ- Photo : twitter/Partisangirl
ವಾಷಿಂಗ್ಟನ್: ಕೆಂಪು ಸಮುದ್ರದಲ್ಲಿ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿ ಯೆಮನ್ನ ಹೌದಿ ಬಂಡುಗೋರರು ನಡೆಸುತ್ತಿರುವ ದಾಳಿಯಲ್ಲಿ ಇರಾನ್ ಆಳವಾಗಿ ಮತ್ತು ನಿಕಟವಾಗಿ ಒಳಗೊಂಡಿದೆ. ಇರಾನ್ ಆಡಳಿತ ಹೌದಿಗಳಿಗೆ ಡ್ರೋನ್, ಕ್ಷಿಪಣಿಗಳು ಹಾಗೂ ಯುದ್ಧತಂತ್ರದ ತಂತ್ರಜ್ಞಾನವನ್ನು ಒದಗಿಸುತ್ತಿದೆ ಎಂದು ಅಮೆರಿಕ ಆರೋಪಿಸಿದೆ.
ಗುಪ್ತಚರ ವರದಿಗಳ ಆಧಾರದಲ್ಲಿ ಅಮೆರಿಕದ ಶ್ವೇತಭವನ ಬಿಡುಗಡೆಗೊಳಿಸಿದ ಆರೋಪಗಳು ದಾಳಿಯಲ್ಲಿ ಇರಾನ್ನ ಉದ್ದೇಶಿತ ಪಾತ್ರದ ಬಗ್ಗೆ ಅಮೆರಿಕ ನೀಡಿದ ಪ್ರಬಲ ಹೇಳಿಕೆಯಾಗಿದೆ. ‘ಕೆಂಪು ಸಮುದ್ರದಲ್ಲಿ ವಾಣಿಜ್ಯ ಹಡಗುಗಳ ವಿರುದ್ಧದ ದಾಳಿಗಳನ್ನು ಯೋಜಿಸುವ ಪ್ರಕ್ರಿಯೆಯಲ್ಲಿ ಇರಾನ್ ಆಳವಾಗಿ ಒಳಗೊಂಡಿರುವುದು ನಮಗೆ ತಿಳಿದಿದೆ. ಈ ವಲಯದಲ್ಲಿ ಹೌದಿಗಳು ನಡೆಸುತ್ತಿರುವ ಅಸ್ಥಿರಗೊಳಿಸುವ ಕ್ರಮಗಳಿಗೆ ಇರಾನ್ ನೀಡುತ್ತಿರುವ ದೀರ್ಘಾವಧಿಯ ಪ್ರೋತ್ಸಾಹಿಸುವ ಕೃತ್ಯಗಳಿಗೆ ಇದು ಪೂರಕವಾಗಿದೆ. ಈ ಬೇಜವಾಬ್ದಾರಿ ವರ್ತನೆಯಿಂದ ಹೌದಿಗಳನ್ನು ತಡೆಯುವ ಯಾವುದೇ ಪ್ರಯತ್ನವನ್ನು ಇರಾನ್ ಮಾಡುತ್ತಿಲ್ಲ’ ಎಂದು ರಾಷ್ಟ್ರೀಯ ಭದ್ರತಾ ಸಮಿತಿಯ ವಕ್ತಾರೆ ಆಡ್ರಿಯನ್ ವಾಟ್ಸನ್ ಹೇಳಿದ್ದಾರೆ.
ಇರಾನ್ ಬೆಂಬಲಿತ ಹೌದಿ ಬಂಡುಗೋರರು ಕೆಂಪು ಸಮುದ್ರದಲ್ಲಿ ಟ್ಯಾಂಕರ್ಗಳು, ಸರಕು ಹಡಗುಗಳು ಮತ್ತು ಇತರ ಹಡಗುಗಳ ಮೇಲೆ ದಾಳಿಯನ್ನು ಹೆಚ್ಚಿಸಿದ್ದು ಇದು ಇದು ಜಾಗತಿಕ ವ್ಯಾಪಾರದ 12%ದಷ್ಟು ಸಾಗುವ ಸಾರಿಗೆ ಮಾರ್ಗವನ್ನು ದುರ್ಬಲಗೊಳಿಸಿದೆ. ಜಾಗತಿಕ ವ್ಯಾಪಾರಕ್ಕೆ ಅಡ್ಡಿಯಾಗಿರುವ ಹೌದಿ ದಾಳಿಗಳನ್ನು ಹತ್ತಿಕ್ಕಲು ರಚಿಸಲಾಗಿರುವ ಜಾಗತಿಕ ಒಕ್ಕೂಟಕ್ಕೆ 20 ರಾಷ್ಟ್ರಗಳು ಕೈಜೋಡಿಸಿವೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಘೋಷಿಸಿದೆ.
ಈ ಮಧ್ಯೆ, ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲೆ ಹೌದಿಗಳ ದಾಳಿಯನ್ನು ನಿಕಟವಾಗಿ ಮತ್ತು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಆದರೆ ಇಲ್ಲಿನ ಪರಿಸ್ಥಿತಿ ಸರಕುಗಳ ಬೆಲೆ ಅಥವಾ ಲಭ್ಯತೆಯ ಮೇಲೆ ಗಮನಾರ್ಹ ಪರಿಣಾಮ ಬೀರುವ ನಿರೀಕ್ಷೆಯಿಲ್ಲ ಎಂದು ಶ್ವೇತಭವನ ಗುರುವಾರ ಹೇಳಿದೆ.
ಅಮೆರಿಕದ ಆರ್ಥಿಕತೆಯು ಸ್ಥಿತಿಸ್ಥಾಪಕತ್ವವನ್ನು ಸಾಬೀತುಪಡಿಸಿದೆ. ಹಣದುಬ್ಬರವು ನಿರೀಕ್ಷಿಸಿದ್ದಕ್ಕಿಂತಲೂ ವೇಗವಾಗಿ ಇಳಿದಿದೆ. ಕಾರ್ಮಿಕರ ಮಾರುಕಟ್ಟೆ ಪುಟಿದೆದ್ದಿದೆ ಮತ್ತು ಬೆಳವಣಿಗೆಯ ಗತಿ ದೃಢವಾಗಿ ಉಳಿದಿದೆ. ಆದರೆ ಉಕ್ರೇನ್ನಲ್ಲಿ ರಶ್ಯ ನಡೆಸುತ್ತಿರುವ ಯುದ್ಧ ಮತ್ತು ಇದರಿಂದ ಧಾನ್ಯ ಮಾರುಕಟ್ಟೆಯ ಮೇಲಾಗುವ ತೊಡಕುಗಳು, ಕೆಂಪು ಸಮುದ್ರದಲ್ಲಿ ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿಯಂತಹ ಸಮಸ್ಯೆ ಹಾಗೂ ಅಪಾಯದ ಬಗ್ಗೆ ಆಡಳಿತವು ತೀವ್ರವಾಗಿ ಜಾಗರೂಕವಾಗಿದೆ ಎಂದು ಶ್ವೇತಭವನದ ರಾಷ್ಟ್ರೀಯ ಆರ್ಥಿಕ ಸಮಿತಿಯ ನಿರ್ದೇಶಕಿ ಲಯೆಲ್ ಬ್ರೈನಾರ್ಡ್ ಹೇಳಿದ್ದಾರೆ.







