ಇಸ್ರೇಲ್ ದಾಳಿಯಲ್ಲಿ ಅಲಿ ಲಾರಿಜಾನಿ ಹತ್ಯೆ: ದೃಢಪಡಿಸಿದ ಇರಾನ್

ಅಲಿ ಲಾರಿಜಾನಿ | Photo Credit : aljazeera.com
ಟೆಹ್ರಾನ್, ಮಾ.18: ಇಸ್ರೇಲ್ ಮಂಗಳವಾರ ಮುಂಜಾನೆ ನಡೆಸಿದ ದಾಳಿಯಲ್ಲಿ ಇರಾನ್ ನ ಹಿರಿಯ ಭದ್ರತಾ ನಾಯಕ ಅಲಿ ಲಾರಿಜಾನಿ ಮೃತಪಟ್ಟಿದ್ದಾರೆ ಎಂದು ಇರಾನ್ ಸರ್ಕಾರ ದೃಢಪಡಿಸಿದೆ ಎಂದು Aljazeera ವರದಿ ಮಾಡಿದೆ.
ಇರಾನ್ನ ಅರೆ ಸರಕಾರಿ ಸುದ್ದಿ ಮಾಧ್ಯಮ ‘ಮೆಹರ್ ನ್ಯೂಸ್’ ವರದಿಯ ಪ್ರಕಾರ, ದೇಶದ ಸರ್ವೋಚ್ಚ ರಾಷ್ಟ್ರೀಯ ಭದ್ರತಾ ಮಂಡಳಿಯು ಈ ಮಾಹಿತಿಯನ್ನು ಅಧಿಕೃತವಾಗಿ ಘೋಷಿಸಿದೆ. ಇಸ್ರೇಲ್ ತನ್ನ ದಾಳಿಯಲ್ಲಿ ಲಾರಿಜಾನಿಯವರನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಿರುವುದಾಗಿ ಹೇಳಿಕೊಂಡ ನಂತರ ಈ ದೃಢೀಕರಣ ಹೊರಬಂದಿದೆ.
“ಇರಾನ್ನ ಅಭಿವೃದ್ಧಿ ಮತ್ತು ಇಸ್ಲಾಮಿಕ್ ಕ್ರಾಂತಿಗಾಗಿ ಜೀವನವಿಡೀ ಸೇವೆ ಸಲ್ಲಿಸಿದ ಅವರು, ಕೊನೆಗೆ ಹುತಾತ್ಮರಾಗಿದ್ದಾರೆ,” ಎಂದು ರಾಷ್ಟ್ರೀಯ ಭದ್ರತಾ ಮಂಡಳಿಯು ಹೇಳಿಕೆಯಲ್ಲಿ ತಿಳಿಸಿದೆ
ಇದಕ್ಕೆ ಪ್ರತಿಕ್ರಿಯಿಸಿದ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಲಾರಿಜಾನಿಯವರನ್ನು “ವಿಶಿಷ್ಟ ಚಿಂತಕ ಮತ್ತು ಕ್ರಾಂತಿಕಾರಿ ನಾಯಕ” ಎಂದು ಕರೆದಿದೆ.
ತಸ್ನಿಮ್ ಸುದ್ದಿ ಸಂಸ್ಥೆ ಪ್ರಕಟಿಸಿದ ಹೇಳಿಕೆಯಲ್ಲಿ, “ಅವರ ರಕ್ತವು ದೇಶದಲ್ಲಿ ಶಕ್ತಿ ಮತ್ತು ರಾಷ್ಟ್ರೀಯ ಜಾಗೃತಿಗೆ ಕಾರಣವಾಗುತ್ತದೆ,” ಎಂದು ಐಆರ್ಜಿಸಿ ಹೇಳಿದೆ.
“ಈ ದಾಳಿಯನ್ನು ನಾವು ಮರೆಯುವುದಿಲ್ಲ,” ಎಂದು ಐಆರ್ಜಿಸಿ ಎಚ್ಚರಿಕೆ ನೀಡಿದೆ.







