ಇರಾನ್ ಸಂಘರ್ಷ | ಒಂದೇ ದಿನದಲ್ಲಿ ಮುಗಿದ ಪಾಕಿಸ್ತಾನ ಆತಿಥ್ಯದ ಉನ್ನತ ಸಭೆ

Photo Credit ; aljazeera.com
ಇಸ್ಲಾಮಾಬಾದ್, ಮಾ.30: ಇರಾನ್ ಯುದ್ಧ ಅಂತ್ಯಗೊಳಿಸುವ ನಿಟ್ಟಿನಲ್ಲಿ ನೀಲ ನಕ್ಷೆಯನ್ನು ರೂಪಿಸುವ ಉದ್ದೇಶದಿಂದ ಪಾಕಿಸ್ತಾನ ಆಯೋಜಿಸಿದ್ದ ನಾಲ್ಕು ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ ನಿಗದಿತ ಅವಧಿಗೂ ಮುನ್ನ ಮೊಟಕುಗೊಂಡಿರುವುದಾಗಿ ವರದಿಯಾಗಿದೆ.
ರವಿವಾರ ಮತ್ತು ಸೋಮವಾರ ಇಸ್ಲಾಮಾಬಾದ್ನಲ್ಲಿ ಪಾಕಿಸ್ತಾನ ವಿದೇಶಾಂಗ ಸಚಿವರ ನೇತೃತ್ವದಲ್ಲಿ ಟರ್ಕಿ, ಸೌದಿ ಅರೇಬಿಯಾ ಮತ್ತು ಈಜಿಪ್ಟ್ ವಿದೇಶಾಂಗ ಸಚಿವರ ಸಭೆ ನಿಗದಿಯಾಗಿತ್ತು. ಆದರೆ ರವಿವಾರ ತಡರಾತ್ರಿಯೇ ಸಭೆಯನ್ನು ಮುಕ್ತಾಯಗೊಳಿಸಲಾಗಿದೆ. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವೆ ಗಡಿಭಾಗದಲ್ಲಿ ಮತ್ತೊಮ್ಮೆ ತೀವ್ರ ಗುಂಡಿನ ಚಕಮಕಿ ಪ್ರಾರಂಭಗೊಂಡ ಬಳಿಕ ಸಭೆಯನ್ನು ತರಾತುರಿಯಲ್ಲಿ ಅಂತ್ಯಗೊಳಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸಭೆಯ ಬಳಿಕ ನಾಲ್ಕೂ ರಾಷ್ಟ್ರಗಳ ಪ್ರತಿನಿಧಿಗಳು ಮುಸ್ಲಿಂ ಏಕತೆಯನ್ನು ಒತ್ತಿಹೇಳಿದರು ಹಾಗೂ ಹಗೆತನದ ಅಂತ್ಯಕ್ಕೆ ಕರೆ ನೀಡಿದರು. ಅಮೆರಿಕ–ಇರಾನ್ ನಡುವಿನ ರಚನಾತ್ಮಕ ಮಾತುಕತೆಯನ್ನು ಬೆಂಬಲಿಸಿದರು ಎಂದು ವರದಿ ಹೇಳಿದೆ.





