ಇರಾನ್ ಸಂಘರ್ಷದಲ್ಲಿ NATO ಅಸಹಕಾರ; ಜರ್ಮನಿಯಿಂದ 5 ಸಾವಿರ ಯೋಧರನ್ನು ವಾಪಸು ಕರೆಸಿಕೊಂಡ ಅಮೆರಿಕ

Photo : PTI
ವಾಷಿಂಗ್ಟನ್: ಇರಾನ್ ಸಂಘರ್ಷದ ಬಗ್ಗೆ ಡೊನಾಲ್ಡ್ ಟ್ರಂಪ್ ಹಾಗೂ ಯುರೋಪಿಯನ್ ಮಿತ್ರರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅಮೆರಿಕವು ಜರ್ಮನಿಯಿಂದ ಸುಮಾರು 5,000 ಸೈನಿಕರನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದೆ ಎಂದು ಪೆಂಟಗನ್ ಶುಕ್ರವಾರ ತಿಳಿಸಿದೆ.
ಇರಾನ್ ಜೊತೆ ಮಾತುಕತೆ ನಡೆಸುವ ಯುರೋಪಿನ ನಿಲುವನ್ನು ಟ್ರಂಪ್ ಟೀಕಿಸಿದ್ದರು. ಇದರಿಂದ ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಅವರೊಂದಿಗೆ ತೀವ್ರ ವಾಗ್ವಾದ ನಡೆದಿತ್ತು. ಇದೇ ವೇಳೆ, ಟೆಹ್ರಾನ್ ಅಮೆರಿಕವನ್ನು ಅವಮಾನಿಸುತ್ತಿದೆ ಎಂದು ಟ್ರಂಪ್ ಆರೋಪಿಸಿದ್ದರು.
ಟ್ರಂಪ್ ಅವರ ಹೇಳಿಕೆಗಳು ಸರಿಯಲ್ಲ ಎಂದು ಪೆಂಟಗನ್ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಪೆಂಟಗನ್ ಪ್ರಕಾರ, ಯುದ್ಧ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಸೈನಿಕರನ್ನು ಹಿಂದಕ್ಕೆ ಕರೆಸಲು ಆದೇಶಿಸಿದ್ದಾರೆ. ಈ ಪ್ರಕ್ರಿಯೆ 6ರಿಂದ 12 ತಿಂಗಳಲ್ಲಿ ಮುಗಿಯಲಿದೆ.
ಜೋ ಬೈಡೆನ್ ಆಡಳಿತಾವಧಿಯಲ್ಲಿ ಯುರೋಪಿನಲ್ಲಿ ಹೆಚ್ಚಿಸಲಾದ ಅಮೆರಿಕ ಪಡೆಗಳನ್ನು, ರಷ್ಯಾ–ಉಕ್ರೇನ್ ಯುದ್ಧಕ್ಕೂ ಮುಂಚಿನ ಮಟ್ಟಕ್ಕೆ ಇಳಿಸುವುದೇ ಈ ಕ್ರಮದ ಉದ್ದೇಶವಾಗಿದೆ.
ಈ ಕ್ರಮದ ಭಾಗವಾಗಿ, ಜರ್ಮನಿಯಲ್ಲಿ ಇರುವ ಒಂದು ದೊಡ್ಡ ಸೈನಿಕ ಪಡೆವನ್ನು ಹಿಂದಕ್ಕೆ ಕರೆಸಿಕೊಳ್ಳಲಾಗುತ್ತದೆ. ಜೊತೆಗೆ ಹೊಸದಾಗಿ ಕಳುಹಿಸಲು ಯೋಜಿಸಿದ್ದ ಇನ್ನೊಂದು ಪಡೆ ಯೋಜನೆಯನ್ನು ರದ್ದುಪಡಿಸಲಾಗಿದೆ.
ಜರ್ಮನಿಯಲ್ಲಿ ಸದ್ಯ ಸುಮಾರು 35,000 ಅಮೆರಿಕ ಸೈನಿಕರು ನೆಲೆಸಿದ್ದಾರೆ. ಇದು ಯುರೋಪಿನಲ್ಲಿನ ಅಮೆರಿಕದ ಅತಿದೊಡ್ಡ ಸೇನಾ ನೆಲೆ. ತರಬೇತಿ ಮತ್ತು ಸರಕು ವ್ಯವಸ್ಥೆಗಾಗಿ ಇದು ಪ್ರಮುಖ ಕೇಂದ್ರವಾಗಿದೆ.
ಇರಾನ್ ಸಂಘರ್ಷದ ಸಮಯದಲ್ಲಿ NATO ಮಿತ್ರರಾಷ್ಟ್ರಗಳಿಂದ ಸಮರ್ಪಕ ಬೆಂಬಲ ಸಿಗಲಿಲ್ಲ. ಇದರಿಂದ ಅಮೆರಿಕ ಅಸಮಾಧಾನಗೊಂಡಿದೆ. ಈ ನಿರ್ಧಾರ ಅದನ್ನೇ ಸೂಚಿಸುತ್ತದೆ. ಜಗತ್ತಿನ ಪ್ರಮುಖ ತೈಲ ಸಾಗಣೆ ಮಾರ್ಗವಾದ ಹಾರ್ಮುಝ್ ಜಲಸಂಧಿಯ ಭದ್ರತೆಗೆ ಯುರೋಪ್ ಸಹಕರಿಸಲಿಲ್ಲ ಎಂದು ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇರಾನ್ ಮೇಲೆ ದಾಳಿ ಮಾಡುವ ಮೊದಲು ಯುರೋಪ್ಗೆ ಹೇಳಲಿಲ್ಲ ಎಂದು ಮೆರ್ಜ್ ಹೇಳಿದ್ದಾರೆ. ಯುದ್ಧ ಹೇಗೆ ಮುಂದುವರಿಯುತ್ತದೆ ಎಂಬುದರ ಬಗ್ಗೆ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
“ಮಿತ್ರರಾಷ್ಟ್ರಗಳ ಹೇಳಿಕೆಗಳು ಮತ್ತು ಅಮೆರಿಕದ ಕಾರ್ಯಾಚರಣೆಗಳಿಗೆ ಬೆಂಬಲ ನೀಡದಿರುವ ಬಗ್ಗೆ ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಪೆಂಟಗನ್ ಅಧಿಕಾರಿಯನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.






