ಸಂವರ್ಧಿತ ಯುರೇನಿಯಂ ಅನ್ನು ಹಸ್ತಾಂತರಿಸುವುದಿಲ್ಲ: ಸ್ಪಷ್ಟಪಡಿಸಿದ ಇರಾನ್

Photo credit: AP
ಟೆಹ್ರಾನ್: ಸಂವರ್ಧಿತ ಯುರೇನಿಯಂ ಅನ್ನು ದೇಶದಿಂದ ಹೊರಗೆ ವರ್ಗಾಯಿಸುವುದಕ್ಕೆ ಇರಾನ್ ಸಮ್ಮತಿಸುವುದಿಲ್ಲ ಎಂದು ಇರಾನ್ನ ರಾಷ್ಟ್ರೀಯ ಭದ್ರತಾ ಸಮಿತಿಯ ವಕ್ತಾರ ಇಬ್ರಾಹಿಂ ರೆಝಾಯಿ ಹೇಳಿದ್ದಾರೆ.
ಇರಾನ್ ಸಂವರ್ಧಿತ ಯುರೇನಿಯಂ ದಾಸ್ತಾನನ್ನು ಹಸ್ತಾಂತರಿಸಲು ಒಪ್ಪಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ಬೆನ್ನಲ್ಲೆ ಅಂತಹ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂದು ರೆಝಾಯಿ ಹೇಳಿದ್ದಾರೆ.
ಯುರೇನಿಯಂ ಪುಷ್ಟೀಕರಣವನ್ನು ಶೂನ್ಯಗೊಳಿಸುವುದು, ಶಾಂತಿಯುತ ಪರಮಾಣು ಕಾರ್ಯಕ್ರಮವನ್ನು ನಿಲ್ಲಿಸುವುದನ್ನು ಟೆಹ್ರಾನ್ ಖಂಡಿತವಾಗಿ ತಿರಸ್ಕರಿಸುತ್ತದೆ ಎಂದು ರೆಝಾಯಿ ತಿಳಿಸಿರುವ ಬಗ್ಗೆ aljazeera.com ವರದಿ ಮಾಡಿದೆ.
ಇರಾನ್ನ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘಾಯಿ ಕೂಡ ಟ್ರಂಪ್ ಅವರ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ. “ಪುಷ್ಟೀಕರಿಸಿದ ಯುರೇನಿಯಂ ನಮಗೆ ಇರಾನ್ ಮಣ್ಣಿನಷ್ಟೇ ಪವಿತ್ರವಾಗಿದೆ ಮತ್ತು ಯಾವುದೇ ಸಂದರ್ಭದಲ್ಲೂ ಅದನ್ನು ಎಲ್ಲಿಯೂ ಹಸ್ತಾಂತರಿಸುವುದಿಲ್ಲ" ಎಂದು ಹೇಳಿದ್ದಾರೆ.




