ಖಾಮಿನೈ ಅಂತ್ಯಕ್ರಿಯೆ ವೇಳೆ ಜನಸಂದಣಿ, ತೀವ್ರ ಉಷ್ಣಾಂಶದಿಂದ ಪ್ರಾಣಹಾನಿ ಸಾಧ್ಯತೆ: ಇರಾನ್ ಉಪಾಧ್ಯಕ್ಷರಿಗೆ ಮುನ್ನೆಚ್ಚರಿಕೆ; ವರದಿ

Photo credit: PTI
ಟೆಹ್ರಾನ್: ಇರಾನ್ನ ಮಾಜಿ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಾಮಿನೈ ಅವರ ಅಂತ್ಯಕ್ರಿಯೆ ವೇಳೆ ಅತಿಯಾದ ಜನಸಂದಣಿ ಮತ್ತು ಬೇಸಿಗೆಯ ತೀವ್ರ ಉಷ್ಣಾಂಶದಿಂದ ಸಂಭವಿಸಬಹುದಾದ ತುರ್ತು ಪರಿಸ್ಥಿತಿ ಮತ್ತು ದುರ್ಘಟನೆಯನ್ನು ತಡೆಯಲು ಇರಾನ್ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಜರ್ಮನಿಯ WELT ಪತ್ರಿಕೆಯು, ಗೌಪ್ಯ ದಾಖಲೆ ಹಾಗೂ ಪೌರಾಡಳಿತ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ವರದಿಯಲ್ಲಿ ಅಂತ್ಯಕ್ರಿಯೆಯ ವೇಳೆ 1,500ರಿಂದ 3,000 ಮಂದಿಯ ಪ್ರಾಣಹಾನಿ ಸಾಧ್ಯತೆ ಇದೆ ಎಂದು ಇರಾನ್ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.
ಇರಾನ್ನ ರೆಡ್ ಕ್ರೆಸೆಂಟ್ ಮತ್ತು ನ್ಯಾಷನಲ್ ಕ್ರೈಸಿಸ್ ಮ್ಯಾನೇಜ್ಮೆಂಟ್ ಆರ್ಗನೈಸೇಶನ್ ಸಂಸ್ಥೆ, ಅಂತ್ಯಕ್ರಿಯೆಯ ಮೆರವಣಿಗೆ ವೇಳೆ ಅತಿಯಾದ ಜನಸಂದಣಿ ಮತ್ತು ಬೇಸಿಗೆಯ ತೀವ್ರ ಉಷ್ಣಾಂಶದಿಂದ ಸಾವಿರಾರು ಮಂದಿಯ ಪ್ರಾಣಹಾನಿಯಾಗುವ ಸಾಧ್ಯತೆ ಇದೆ ಎಂದು ಇರಾನ್ ಉಪಾಧ್ಯಕ್ಷ ಮೊಹಮ್ಮದ್ ರೆಝಾ ಅರೆಫ್ ಅವರಿಗೆ ಗೌಪ್ಯ ಪತ್ರದ ಮೂಲಕ ಮುನ್ನೆಚ್ಚರಿಕೆ ನೀಡಲಾಗಿದೆ ಎಂದು ವರದಿಯು ತಿಳಿಸಿದೆ.
ಅಂತ್ಯಕ್ರಿಯೆಯ ವೇಳೆ ಸಂಭವಿಸಬಹುದಾದ ತುರ್ತು ಪರಿಸ್ಥಿತಿಯನ್ನು ಎದುರಿಸಲು, ಸಾವಿನ ಪ್ರಕರಣಗಳು ಮತ್ತು ನಾಪತ್ತೆಯಾದವರ ನಿರ್ವಹಣೆಗೆ ವಿಶೇಷ ತಂಡವನ್ನು ರಚಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
"ಸಮಾಧಿಗಳನ್ನು ನಿಜವಾಗಿಯೂ ಸಿದ್ಧಪಡಿಸಲಾಗಿದೆ. ಇಷ್ಟು ದೊಡ್ಡ ಜನಸ್ತೋಮ ಮತ್ತು ತೀವ್ರ ಬಿಸಿಲಿನ ನಡುವೆ ಏನಾಗಬಹುದು ಎಂಬುದನ್ನು ಯಾರೂ ಹೇಳಲು ಸಾಧ್ಯವಿಲ್ಲ" ಎಂದು ಟೆಹ್ರಾನ್ನ ಮುನ್ಸಿಪಲ್ ಉದ್ಯೋಗಿಯೊಬ್ಬರು ಹೇಳಿರುವುದಾಗಿ ವರದಿಯು ಉಲ್ಲೇಖಿಸಿದೆ.






