ಕದನ ವಿರಾಮ ಒಪ್ಪಂದ ಉಲ್ಲಂಘನೆ ಆರೋಪ : ಅಮೆರಿಕದೊಂದಿಗೆ ತಿಳುವಳಿಕಾ ಪತ್ರದ ಜಾರಿಗೆ ಇರಾನ್ ನಿರಾಕರಣೆ

ಸಾಂದರ್ಭಿಕ ಚಿತ್ರ | Photo Credit : PTI
ಹೊಸದಿಲ್ಲಿ: ಅಮೆರಿಕವು ಕದನ ವಿರಾಮ ಒಪ್ಪಂದವನ್ನು ಬಹಿರಂಗವಾಗಿ ಉಲ್ಲಂಘಿಸುತ್ತಿದೆ ಎಂದು ಸೋಮವಾರ ಆರೋಪಿಸಿರುವ ಇರಾನ್, ಈ ಹಿಂದೆ ಒಪ್ಪಿಕೊಂಡಿದ್ದ ತಿಳುವಳಿಕಾ ಒಪ್ಪಂದವನ್ನು ತಾನು ಜಾರಿಗೊಳಿಸುವುದಿಲ್ಲ ಎಂದು ಘೋಷಿಸಿದೆ. ಇದು ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯೀಲ್ ಬಘೈ ಅವರು, ಉಭಯ ದೇಶಗಳ ನಡುವಿನ ಸಂಬಂಧಗಳು ಈಗ ಅನಿಶ್ಚಿತತೆಯ ಹಂತವನ್ನು ತಲುಪಿವೆ.
ಅಮೆರಿಕ ತನ್ನ ಬದ್ಧತೆಗಳನ್ನು ಈಡೇರಿಸುವಲ್ಲಿ ವಿಫಲವಾಗಿರುವುದೇ ಇದಕ್ಕೆ ಕಾರಣ ಎಂದು ದೂರಿದರು.
ಅಮೆರಿಕವು ತನ್ನ ಜವಾಬ್ದಾರಿಗಳನ್ನು ಪೂರೈಸುವವರೆಗೆ ಅದರೊಂದಿಗಿನ ಒಪ್ಪಂದವು ಬಿಕ್ಕಟ್ಟಿನಲ್ಲಿದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಅಮೆರಿಕದ ಮಿಲಿಟರಿ ನೆಲೆಗಳ ಮೇಲಿನ ಇರಾನ್ನ ಇತ್ತೀಚಿನ ದಾಳಿಗಳನ್ನು ಸಮರ್ಥಿಸಿಕೊಂಡ ಅವರು, ಈ ಕ್ರಮಗಳನ್ನು ಆತ್ಮರಕ್ಷಣೆಗಾಗಿ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಪ.ಏಶ್ಯಾ ಸಂಘರ್ಷವನ್ನು ಕೊನೆಗೊಳಿಸುವ ಉದ್ದೇಶದಿಂದ ಕಳೆದ ತಿಂಗಳು ತಿಳುವಳಿಕಾ ಪತ್ರಕ್ಕೆ ಸಹಿ ಹಾಕಲಾಗಿತ್ತು. ಇದರ ಬೆನ್ನಲ್ಲೇ ಸ್ವಿಟ್ಜರ್ಲೆಂಡ್ನಲ್ಲಿ ಇರಾನ್ ಮತ್ತು ಅಮೆರಿಕ ನಿಯೋಗಗಳ ನಡುವೆ ಸರಣಿ ಸಭೆಗಳು ನಡೆದಿದ್ದವು. ಆದರೆ ಜುಲೈ ೬ರಂದು ಹಾರ್ಮುಜ್ ಜಲಸಂಧಿಯ ಬಳಿ ಮೂರು ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆದ ನಂತರ ಈ ಸೌಹಾರ್ದತೆಯ ವಾತಾವರಣವು ಹದಗೆಡಲು ಪ್ರಾರಂಭಿಸಿತ್ತು.
ಈ ಘಟನೆಯು ಉಭಯ ದೇಶಗಳ ನಡುವೆ ಉದ್ವಿಗ್ನತೆ ಮತ್ತೆ ಉಲ್ಬಣಗೊಳ್ಳಲು ಕಾರಣವಾಗಿದ್ದು, ಅಮೆರಿಕ ಮತ್ತು ಇರಾನ್ ಪರಸ್ಪರರ ವಿರುದ್ಧ ಆರೋಪಗಳನ್ನು ಹೊರಿಸಿವೆ. ಅಂದಿನಿಂದ, ಎರಡೂ ದೇಶಗಳು ಪರಸ್ಪರ ಮಿಲಿಟರಿ ದಾಳಿಗಳು ಮತ್ತು ತೀಕ್ಷ್ಣವಾದ ವಾಕ್ಸಮರಗಳಲ್ಲಿ ತೊಡಗಿದ್ದು,ಇದು ಪ್ರಾದೇಶಿಕ ಸಂಘರ್ಷಕ್ಕೆ ಕಾರಣವಾಗಬಹುದು ಎಂಬ ಕಳವಳವನ್ನು ಮೂಡಿಸಿದೆ. ಅಲ್ಲದೆ,ಜಗತ್ತಿನ ಅತ್ಯಂತ ನಿರ್ಣಾಯಕ ಕಡಲ ವ್ಯಾಪಾರ ಮಾರ್ಗದ ಭದ್ರತೆಗೆ ಇದು ಸವಾಲಾಗಿದೆ.
ಹಾರ್ಮುಝ್ ಜಲಸಂಧಿಯಲ್ಲಿ ಅಮೆರಿಕದ ಪಾತ್ರಕ್ಕೆ ತಿರಸ್ಕಾರ
ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ಕ್ರಮಗಳನ್ನು ಕಟುವಾಗಿ ಟೀಕಿಸಿದ ಬಘೈ, ಅವು ಪ್ರಾದೇಶಿಕ ಭದ್ರತೆಗೆ ಕೊಡುಗೆ ನೀಡುವ ಬದಲು ಅಸ್ಥಿರತೆಯನ್ನು ಉಂಟುಮಾಡುತ್ತಿವೆ ಎಂದು ಆರೋಪಿಸಿದರು.
ಈ ಪ್ರಮುಖ ಜಲಮಾರ್ಗವನ್ನು ಇರಾನ್ನ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ರೀತಿಯಲ್ಲಿ ಬಳಸಲು ಅನುಮತಿಸುವುದಿಲ್ಲ ಎಂಬ ಟೆಹ್ರಾನ್ನ ದೀರ್ಘಕಾಲದ ನಿಲುವನ್ನು ಅವರು ಪುನರುಚ್ಚರಿಸಿದರು.
ಅಮೆರಿಕ ಪ್ರಾದೇಶಿಕ ಉದ್ವಿಗ್ನತೆಯನ್ನು ಹೆಚ್ಚಿಸುತ್ತಿದೆ
ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ವಾಣಿಜ್ಯ ಹಡಗುಗಳಿಗೆ ತಾನು ಬೆಂಗಾವಲಾಗಿ ನಿಲ್ಲುತ್ತಿದ್ದೇನೆ ಎಂಬ ಅಮೆರಿಕದ ವಾದವನ್ನು ಟೀಕಿಸಿದ ಬಘೈ, ವಾಷಿಂಗ್ಟನ್ ಈ ಪ್ರದೇಶದ ಅಸ್ಥಿರತೆಗೆ ಪ್ರಮುಖ ಕಾರಣ ಎಂದು ಆರೋಪಿಸಿದರು.
ಇಸ್ಲಾಮಾಬಾದ್ನಲ್ಲಿ ಎರಡನೇ ಸುತ್ತಿನ ಮಾತುಕತೆ ನಡೆಯಲಿದೆ ಎಂಬ ವರದಿಗಳನ್ನು ಬಘೈ ತಳ್ಳಿಹಾಕಿದರು. ಕದನ ವಿರಾಮ ಉಲ್ಲಂಘನೆ, ಪ್ರಾದೇಶಿಕ ಭದ್ರತೆ ಮತ್ತು ಹಾರ್ಮುಝ್ ಜಲಸಂಧಿಯಲ್ಲಿನ ಸಂಚಾರದ ಭವಿಷ್ಯದ ಕುರಿತು ಹೆಚ್ಚುತ್ತಿರುವ ಭಿನ್ನಾಭಿಪ್ರಾಯಗಳ ನಡುವೆ ಇರಾನ್ ಮತ್ತು ಅಮೆರಿಕ ನಡುವಿನ ರಾಜತಾಂತ್ರಿಕ ಮಾತುಕತೆಗಳು ಸದ್ಯಕ್ಕೆ ಅನಿಶ್ಚಿತವಾಗಿವೆ ಎಂಬ ಸಂಕೇತವನ್ನು ಇದು ನೀಡಿದೆ.






