ಇಸ್ರೇಲ್ ಮೇಲೆ ಕ್ಷಿಪಣಿ ಮಳೆಗರೆದ ಇರಾನ್: 86 ಮಂದಿಗೆ ಗಾಯ

PC | REUTERS
ಜೆರುಸಲೇಂ: ಇರಾನಿನ ಮೂರು ಪರಮಾಣು ನೆಲೆಗಳ ಮೇಲೆ ಅಮೆರಿಕ ದಾಳಿ ನಡೆಸಿದ ಬಳಿಕ ಇರಾನ್ ಇಸ್ರೇಲ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮಳೆಗರೆದಿದ್ದು ಕನಿಷ್ಠ 86 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
30ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರಯೋಗಿಸಿದ್ದು ಇಸ್ರೇಲ್ನಾದ್ಯಂತ ಸೈರನ್ ಮೊಳಗಿದೆ. ಜೆರುಸಲೇಂನಲ್ಲೂ ಸ್ಫೋಟ ಕೇಳಿಬಂದಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಇರಾನಿನ ಸರ್ಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ. ಇರಾನಿನ ಕ್ಷಿಪಣಿಗಳನ್ನು ಹೊಡೆದುರುಳಿಸಲು ಕಾರ್ಯ ನಿರ್ವಹಿಸುತ್ತಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ. ಇರಾನಿನ ಮೇಲೆ ಅಮೆರಿಕದ ದಾಳಿಯ ಬಳಿಕ ಇಸ್ರೇಲ್ ತನ್ನ ವಾಯುಪ್ರದೇಶವನ್ನು ಮುಚ್ಚಿದೆ.
ವಿನಾಶಕಾರಿ ಸಿಡಿತಲೆ ಶಕ್ತಿಯೊಂದಿಗೆ ದೀರ್ಘ ಶ್ರೇಣಿಯ ಘನ ಮತ್ತು ದ್ರವ ಇಂಧನ ಕ್ಷಿಪಣಿಗಳ ಸಂಯೋಜನೆಯನ್ನು ಬಳಸಿ ಬೆನ್ ಗ್ಯುರಿಯಾನ್ ವಿಮಾನ ನಿಲ್ದಾಣ, ಜೈವಿಕ ಸಂಶೋಧನಾ ಕೇಂದ್ರ, ಕಮಾಂಡ್ ಹಾಗೂ ಕಂಟ್ರೋಲ್ ಕೇಂದ್ರಗಳು ಸೇರಿದಂತೆ ಇಸ್ರೇಲ್ನ ಹಲವು ಪ್ರದೇಶಗಳನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಇರಾನಿನ ಸಶಸ್ತ್ರ ಪಡೆಗಳು ರವಿವಾರ ಹೇಳಿವೆ.
ಇರಾನಿನಿಂದ ಪ್ರಯೋಗಿಸಲಾದ ಬ್ಯಾಲಿಸ್ಟಿಕ್ ಕ್ಷಿಪಣಿ ಹೈಫಾ ನಗರಕ್ಕೆ ಅಪ್ಪಳಿಸಿದೆ. ಜನತೆ ಆತಂಕದಿಂದ ಬಾಂಬ್ ನಿರೋಧಕ ಶೆಲ್ಟರ್ನತ್ತ ಧಾವಿಸಿದ್ದಾರೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.







