ಕಳೆದ 48 ಗಂಟೆಗಳಲ್ಲಿ 12 ದೇಶಗಳ ವಿದೇಶಾಂಗ ಸಚಿವರ ಜತೆ ಮಾತುಕತೆ: ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ

ಅಬ್ಬಾಸ್ ಅರಾಘ್ಚಿ (Photo: India Today)
ಟೆಹರಾನ್: ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ಕಳೆದ 48 ಗಂಟೆಗಳಲ್ಲಿ 12 ದೇಶಗಳ ವಿದೇಶಾಂಗ ಸಚಿವರೊಂದಿಗೆ ಮಾತುಕತೆ ನಡೆಸಿರುವುದಾಗಿ ತಿಳಿಸಿದ್ದಾರೆ ಎಂದು Aljazeera ವರದಿ ಮಾಡಿದೆ.
ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಈ ಮಾತುಕತೆಗಳಲ್ಲಿ ಇರಾನ್ನ ಮೂಲಭೂತ ನಿಲುವುಗಳನ್ನು ಆಯಾ ದೇಶಗಳ ಪ್ರತಿನಿಧಿಗಳ ಮುಂದೆ ಮಂಡಿಸಿರುವುದಾಗಿ ಹೇಳಿದ್ದಾರೆ.
ಪ್ರತಿಯೊಂದು ದೇಶದ ರಾಷ್ಟ್ರೀಯ ಸಾರ್ವಭೌಮತ್ವವನ್ನು ಗೌರವಿಸಬೇಕು, ಹಿಂಸೆ ಮತ್ತು ಬೆದರಿಕೆಗಳನ್ನು ನಿಲ್ಲಿಸಬೇಕು ಹಾಗೂ ದೇಶಗಳ ವ್ಯವಹಾರಗಳಲ್ಲಿ ವಿಭಜನೆಗೆ ಕಾರಣವಾಗುವ ವಿದೇಶಿ ಹಸ್ತಕ್ಷೇಪವನ್ನು ತಡೆಯಬೇಕು ಎಂಬ ವಿಷಯಗಳನ್ನು ಚರ್ಚಿಸಿರುವುದಾಗಿ ತಿಳಿಸಿದ್ದಾರೆ. ಜತೆಗೆ, ಅಭದ್ರತೆ ಹರಡುವುದನ್ನು ತಡೆಯುವ ಅಗತ್ಯವನ್ನೂ ಪ್ರತಿಪಾದಿಸಿರುವುದಾಗಿ ಹೇಳಿದ್ದಾರೆ.
ಹೊರಗಿನ ಪ್ರಾದೇಶಿಕ ಮಹಾಶಕ್ತಿಗಳ ಹಸ್ತಕ್ಷೇಪವಿಲ್ಲದೆ, ಆಯಾ ಪ್ರದೇಶದ ದೇಶಗಳೇ ತಮ್ಮ ಭದ್ರತಾ ವ್ಯವಸ್ಥೆಗಳನ್ನು ರೂಪಿಸಿಕೊಳ್ಳಬೇಕು ಎಂಬ ಪ್ರಸ್ತಾಪವನ್ನೂ ಮಾತುಕತೆ ವೇಳೆ ಮುಂದಿಟ್ಟಿರುವುದಾಗಿ ಅರಾಘ್ಚಿ ತಿಳಿಸಿದ್ದಾರೆ.
ಒಮಾನ್, ಈಜಿಪ್ಟ್, ಜೋರ್ಡಾನ್, ಸೌದಿ ಅರೇಬಿಯ, ಖತರ್, ಸೈಪ್ರಸ್, ತುರ್ಕಿಯೆ, ಕುವೈತ್, ಯುನೈಟೆಡ್ ಅರಬ್ ಎಮಿರೇಟ್ಸ್, ಟುನೀಶಿಯಾ, ಇರಾಕ್ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವರೊಂದಿಗೆ ಮಾತುಕತೆ ನಡೆಸಿರುವುದಾಗಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.




