ಇರಾಕ್ ದೇಶದ ಹಡಗುಗಳಿಗೆ ಹಾರ್ಮುಝ್ ಮೂಲಕ ಸಾಗಲು ಇರಾನ್ ಅನುಮತಿ

ಸಾಂದರ್ಭಿಕ ಚಿತ್ರ | Photo Credit ; AP
ಟೆಹರಾನ್, ಆ.22: ಇರಾಕ್ನ ಸತತ ಮನವಿಗಳ ನಂತರ, ಹಲವಾರು ಇರಾಕಿ ತೈಲ ಟ್ಯಾಂಕರ್ಗಳಿಗೆ ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗಲು ಇರಾನ್ ಅನುಮತಿ ನೀಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಶನಿವಾರ ನಡೆದ `ಬಗ್ದಾದ್ ಡೈಲಾಗ್' ನೀತಿ ಸಮ್ಮೇಳನದಲ್ಲಿ ಮಾತನಾಡಿದ ಇರಾಕ್ ಅಧ್ಯಕ್ಷ ನಿಝಾರ್ ಅಮೀದಿ `ಇರಾಕಿ ತೈಲವನ್ನು ಹೊತ್ತೊಯ್ಯುವ ಹಡಗುಗಳು ಜಲಸಂಧಿಯ ಮೂಲಕ ಹಾದುಹೋಗಲು ಇರಾನ್ ಅನುಕೂಲ ಮಾಡಿಕೊಟ್ಟಿದೆ ಮತ್ತು ಹಾರ್ಮುಝ್ ಮೂಲಕ ಇರಾಕಿ ತೈಲ ರಫ್ತು ಮಾಡುವ ಕುರಿತು ಇರಾನ್ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ' ಎಂದು ಹೇಳಿದರು.
ಹಾರ್ಮುಝ್ ಜಲಸಂಧಿ ಬಹುತೇಕ ಬಂದ್ ಆಗಿರುವುದರಿಂದ ಅತ್ಯಂತ ಹೆಚ್ಚು ಬಾಧಿತವಾದ ದೇಶಗಳಲ್ಲಿ ಇರಾಕ್ ಒಂದಾಗಿದೆ.
ಯುದ್ಧ ಪ್ರಾರಂಭವಾಗುವ ಮೊದಲು ಇರಾಕ್ ದಿನಕ್ಕೆ ಸುಮಾರು 4 ದಶಲಕ್ಷ ಬ್ಯಾರೆಲ್ ತೈಲವನ್ನು ಉತ್ಪಾದಿಸುತ್ತಿತ್ತು. ಬಗ್ದಾದ್ ಈಗ ತುರ್ಕಿಯೆಯ ಸೈಹಾನ್ ಬಂದರು, ಸಿರಿಯಾದ ಬಾನಿಯಾಸ್ ಹಾಗೂ ಜೋರ್ಡಾನ್ನ ಅಕಾಬಾ ಬಂದರುಗಳ ಮೂಲಕ ತೈಲ ರಫ್ತು ಪ್ರಾರಂಭಿಸಲು ಕೆಲಸ ಮಾಡುತ್ತಿದೆ ಎಂದು ವರದಿಯಾಗಿದೆ.
ಇತರ ದೇಶಗಳ ವಿರುದ್ಧದ ದಾಳಿಗೆ ಇರಾಕ್ ಭೂಪ್ರದೇಶ ಬಳಕೆಗೆ ಅವಕಾಶವಿಲ್ಲ:
ಇತರ ದೇಶಗಳ ವಿರುದ್ಧ ದಾಳಿ ನಡೆಸಲು ಇರಾಕ್ ಭೂಪ್ರದೇಶವನ್ನು ಬಳಸಿಕೊಳ್ಳಲು ಅನುಮತಿಸುವುದಿಲ್ಲ ಎಂದು ಇರಾಕ್ ಅಧ್ಯಕ್ಷ ನಿಝಾರ್ ಅಮೀದಿ ಅವರು ಹೇಳಿದ್ದಾರೆ.
ಇರಾಕ್ ನೆಲವನ್ನು ಬಳಸಿಕೊಂಡು ಪ್ರಾದೇಶಿಕ ದೇಶಗಳ ವಿರುದ್ಧ ನಡೆಸಲಾಗುವ ದಾಳಿಗಳಿಗೆ ಯಾವುದೇ ಸಮರ್ಥನೆ ಇಲ್ಲ. ಪ್ರಸ್ತುತ ನಡೆಯುತ್ತಿರುವ ಪ್ರಾದೇಶಿಕ ಯುದ್ಧಕ್ಕೆ ಇರಾಕ್ ಸಿಲುಕಿಕೊಳ್ಳುವುದನ್ನು ತಪ್ಪಿಸಬೇಕಿದೆ. ಇದರ ದುಷ್ಪರಿಣಾಮಗಳು ನಮ್ಮ ದೇಶದ ಮೇಲೆ ಕಠಿಣವಾಗಿವೆ ಎಂದು ಅವರು ತಿಳಿಸಿದರು.






