ವಿನಾಶ ತಪ್ಪಿಸಿಕೊಳ್ಳಲು ಇರಾನ್ಗೆ ಕೊನೆಯ ಅವಕಾಶ : ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್ | Photo Credit ; PTI
ವಾಶಿಂಗ್ಟನ್, ಆ.4: ಇರಾನ್ನೊಂದಿಗೆ ಸಂಧಾನ ಮಾತುಕತೆಗಳು ಈಗ ನಡೆಯುತ್ತಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದು, ಅಮೆರಿಕದ ದಾಳಿ ತೀವ್ರಗೊಳ್ಳುವುದನ್ನು ತಪ್ಪಿಸಲು ಮತ್ತು ಒಪ್ಪಂದ ಮಾಡಿಕೊಳ್ಳಲು ಇರಾನ್ಗೆ ಇದು ಕೊನೆಯ ಅವಕಾಶ ಎಂದು ಪ್ರತಿಪಾದಿಸಿದ್ದಾರೆ.
ಉತ್ತಮ ಒಪ್ಪಂದಕ್ಕೆ ಸಹಿ ಹಾಕಲು ಇದು ಅವರಿಗೆ ಸಿಕ್ಕಿರುವ ಕೊನೆಯ ಅವಕಾಶವಾಗಿದೆ. ಹಾರ್ಮುಝ್ ಜಲಸಂಧಿಯನ್ನು ಮುಕ್ತಗೊಳಿಸುವ ಮತ್ತು ಇರಾನ್ನ ಪರಮಾಣು ಕಾರ್ಯಕ್ರಮದ ಕುರಿತು ಅಮೆರಿಕದ ಕಳವಳಗಳನ್ನು ಪರಿಹರಿಸಲು ದಾರಿ ಮಾಡಿಕೊಡುವ ಮಾತುಕತೆಗಳು ಮುಂದಿನ ಒಂದು ಅಥವಾ ಎರಡು ದಿನಗಳಲ್ಲಿ ಪ್ರಾರಂಭವಾಗಲಿವೆ ಎಂದು ತಾನು ನಿರೀಕ್ಷಿಸುವುದಾಗಿ ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಟ್ರಂಪ್ ಹೇಳಿದರು.
`ಅವರು (ಇರಾನ್) ಸಭೆಗೆ ವಿನಂತಿಸುತ್ತಾರೆ, ಮಾತುಕತೆಗಳು ಪ್ರಾರಂಭವಾಗುತ್ತವೆ ಮತ್ತು ಸನ್ನಿಹಿತ ಭವಿಷ್ಯದಲ್ಲಿ ಇನ್ನಷ್ಟು ಸಭೆಗಳನ್ನು ನಿಗದಿಪಡಿಸಲಾಗುತ್ತದೆ. ಆದರೆ ಅವರು ಅದನ್ನು ಬಹಿರಂಗವಾಗಿ ಒಪ್ಪಿಕೊಳ್ಳುವುದಿಲ್ಲ. ಯಾವುದೇ ಚರ್ಚೆ ನಡೆಸುತ್ತಿಲ್ಲ, ಯಾವುದರ ಬಗ್ಗೆಯೂ ಮಾತನಾಡುತ್ತಿಲ್ಲ ಮತ್ತು ನಾವು ಒಮಾನ್ ಜೊತೆ ಮಾತ್ರ ವ್ಯವಹರಿಸುತ್ತಿದ್ದೇವೆ ಎಂದು ಬಹಿರಂಗವಾಗಿ ಮತ್ತು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ' ಎಂದು ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದು ತಾವು ಇರಾನ್ ವಿಷಯದಲ್ಲಿ ತಾಳ್ಮೆ ಕಳೆದುಕೊಳ್ಳುತ್ತಿರುವುದಾಗಿ ಪುನರುಚ್ಚರಿಸಿದರು.
ಅಮೆರಿಕದ ಯುದ್ಧನೌಕೆಗಳೂ ದಾಳಿಯ ಗುರಿಗಳಾಗಬಹುದು : ಇರಾನ್ ಎಚ್ಚರಿಕೆ
ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಿಗದಿಪಡಿಸಿದ ಮಾರ್ಗಗಳನ್ನು ಹೊರತುಪಡಿಸಿ ಅಮೆರಿಕ ತನ್ನದೇ ಆದ ಪ್ರತ್ಯೇಕ ಮಾರ್ಗಗಳನ್ನು ನಿರ್ಮಿಸಲು ಎಂದಿಗೂ ಅನುಮತಿಸುವುದಿಲ್ಲ. ಇಂತಹ ಮಾರ್ಗಗಳಲ್ಲಿ ನಿಯೋಜಿಸಲಾದ ಅಮೆರಿಕದ ಯುದ್ಧನೌಕೆಗಳನ್ನು ಸಹ ದಾಳಿಯ ಗುರಿಗಳೆಂದು ಪರಿಗಣಿಸಲಾಗುವುದು ಎಂದು ಇರಾನ್ನ ಸರ್ವೋಚ್ಛ ನಾಯಕರ ಮಿಲಿಟರಿ ಸಲಹೆಗಾರರಾದ ಮೊಹ್ಸೆನ್ ರೆಝಾಯಿ ಎಚ್ಚರಿಸಿದ್ದಾರೆ.
ಇರಾನ್ ಯುದ್ಧವನ್ನು ಬಯಸುವುದಿಲ್ಲ, ಆದರೆ ಅದರ ಸಶಸ್ತ್ರ ಪಡೆಗಳು ಸಂಪೂರ್ಣವಾಗಿ ಸಜ್ಜಾಗಿದ್ದು, ದೇಶಕ್ಕಾಗಿ ಹೋರಾಡಲು ಸಿದ್ಧವಾಗಿವೆ. ಜೂನ್ನಲ್ಲಿ ಉಭಯ ದೇಶಗಳ ನಡುವೆ ಸಹಿ ಮಾಡಲಾದ ಸಾಮರಸ್ಯ ಒಪ್ಪಂದದ ಕರಾರುಗಳನ್ನು ಅಮೆರಿಕ ಪಾಲಿಸಬೇಕು ಮತ್ತು ತನ್ನ ನಡವಳಿಕೆಯನ್ನು ಬದಲಾಯಿಸಿಕೊಳ್ಳಬೇಕು, ಇಲ್ಲದಿದ್ದರೆ ಅಮೆರಿಕದ ಯುದ್ಧನೌಕೆಗಳು ಗಂಭೀರ ಅಪಾಯವನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಜುಲೈ 25ರಂದು ಕ್ಯಾಸ್ಪಿಯನ್ ಸಮುದ್ರದಲ್ಲಿ ಇರಾನ್ನ ವಾಣಿಜ್ಯ ಹಡಗೊಂದರ ಮೇಲೆ ಉಕ್ರೇನ್ ನಡೆಸಿದ ದಾಳಿಯಲ್ಲಿ ಒಬ್ಬ ನಾವಿಕ ಮೃತಪಟ್ಟು, ಮೂವರು ಗಾಯಗೊಂಡಿದ್ದರು. ಈ ಘಟನೆಯ ಪ್ರತೀಕಾರವಾಗಿ ಉಕ್ರೇನ್ನ ಮೂರು ಪ್ರದೇಶಗಳ ಮೇಲೆ ದಾಳಿ ನಡೆಸಲು ಇರಾನ್ ಸಿದ್ಧತೆ ನಡೆಸಿತ್ತು. ಆದರೆ ಉಕ್ರೇನ್ ಕ್ಷಮೆಯಾಚಿಸಿದ ನಂತರ ಈ ಯೋಜನೆಯನ್ನು ಕೈಬಿಡಲಾಯಿತು ಎಂದು ರೆಝಾಯಿ ಹೇಳಿದ್ದಾರೆ.






