ಹಾರ್ಮುಝ್ ಮೇಲಿನ ಪ್ರಭಾವವನ್ನು ಇರಾನ್ ಕಳೆದುಕೊಂಡಿದೆ : ಟ್ರಂಪ್

ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್, ಆ. 28: ಅಮೆರಿಕದ ಪಡೆಗಳು ಹಾರ್ಮುಝ್ ಜಲಸಂಧಿಯಲ್ಲಿ ಸಮುದ್ರದಡಿಯ ಸ್ಫೋಟಕಗಳನ್ನು ತೆರವುಗೊಳಿಸುವ ಜೊತೆಗೆ ಇರಾನ್ನ ಬಂದರುಗಳ ದಿಗ್ಬಂಧನವನ್ನು ಮುಂದುವರಿಸಿವೆ. ಈಗ ಇರಾನ್ ಈ ಪ್ರಮುಖ ಜಲಮಾರ್ಗದ ಮೇಲೆ ಹೊಂದಿದ್ದ ಹೆಚ್ಚಿನ ಪ್ರಭಾವವನ್ನು ಕಳೆದುಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಮತ್ತೆ ಪ್ರತಿಪಾದಿಸಿದ್ದು, ಹಾರ್ಮುಝ್ ಜಲಸಂಧಿಯು ಪರಿಣಾಮಕಾರಿಯಾಗಿ ತೆರೆದಿದೆ ಎಂದು ಘೋಷಿಸಿದ್ದಾರೆ.
‘ಆ ಮುಚ್ಚಿದ್ದ ಹಾದಿ ಈಗ ತೆರೆದಿದೆ. ಇರಾನ್ ನ ಪ್ರತಿಕ್ರಿಯೆ ಬಹಳ ಮೃದುವಾಗಿದೆ. ನಾವು ಮತ್ತೆ ಅವರ ಮೇಲೆ ದಾಳಿ ಮಾಡುವುದು ಅವರಿಗೆ ಇಷ್ಟವಿಲ್ಲ. ಅಂತಿಮವಾಗಿ ಇಡೀ ಆಟದ ಸಾರಾಂಶವೇ ಇದು. ಉಳಿದದ್ದು ಯಾವುದೂ ಮುಖ್ಯವಲ್ಲ’ ಎಂದು ಟ್ರಂಪ್ ಹೇಳಿರುವುದಾಗಿ ‘ಆಕ್ಸಿಯೋಸ್’ ವರದಿ ಮಾಡಿದೆ.
ಈ ಮಧ್ಯೆ, ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ಇರಿಸಿದ್ದ ಸಮುದ್ರದಡಿಯ ಸ್ಫೋಟಕ ಸಾಧನಗಳನ್ನು ತೆರವುಗೊಳಿಸಲಾಗಿದ್ದು, ಇದು ಈ ಆಯಕಟ್ಟಿನ ಜಲಮಾರ್ಗದಲ್ಲಿ ಸಾಧಿಸಿದ ಪ್ರಮುಖ ಮೈಲಿಗಲ್ಲು ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಪ್ರತಿಪಾದಿಸಿದೆ.
‘ಕಳೆದ ಕೆಲವು ತಿಂಗಳುಗಳಲ್ಲಿ, ನಮ್ಮ ಪಡೆಗಳು ನೌಕಾಪಡೆಯ ಮುಳುಗುತಜ್ಞರು, ನೌಕಾಪಡೆಯ ವಿಶೇಷ ಪಡೆ ಹಾಗೂ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಶಕ್ತಿಯ ಸಂಯೋಜನೆಯನ್ನು ಬಳಸಿಕೊಂಡು ಸಮುದ್ರ ಸ್ಫೋಟಕಗಳ ಭೀತಿಯನ್ನು ಅತ್ಯಂತ ಜಾಗರೂಕತೆಯಿಂದ ತೆರವುಗೊಳಿಸಿವೆ. ಹಾರ್ಮುಝ್ ಜಲಸಂಧಿಯಲ್ಲಿನ ಅಂತಾರಾಷ್ಟ್ರೀಯ ಹಡಗು ಸಂಚಾರ ಮಾರ್ಗಗಳು ಮುಕ್ತವಾಗಿವೆ ಮತ್ತು ಸಂಚಾರ ಚೇತರಿಸಿಕೊಳ್ಳುತ್ತಿದೆ. ಈ ಪ್ರದೇಶದಾದ್ಯಂತ ಕಾರ್ಯಾಚರಣೆ ನಡೆಸುತ್ತಿರುವ ನಮ್ಮ 50,000 ಸೈನಿಕರಲ್ಲಿ ಹಲವರು ಇರಾನ್ ವಿರುದ್ಧ ನೌಕಾ ದಿಗ್ಬಂಧನವನ್ನು ಜಾರಿಗೆ ತರುವ ಜೊತೆಗೆ ಹಾರ್ಮುಝ್ ಜಲಸಂಧಿಯ ಮೂಲಕ ವಾಣಿಜ್ಯ ಸಂಚಾರದ ಹರಿವನ್ನು ಕಾಯ್ದುಕೊಳ್ಳುವ ಅತ್ಯುತ್ತಮ ಕೆಲಸವನ್ನು ಮಾಡುತ್ತಿದ್ದಾರೆ’ ಎಂದು ಸೆಂಟ್ರಲ್ ಕಮಾಂಡ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.






