ಪರಮಾಣು ಕಾರ್ಯಕ್ರಮದ ಕುರಿತು ಚೀನಾ, ರಶ್ಯಾ ಜೊತೆ ಮಾತುಕತೆ: ಇರಾನ್

ಅಬ್ಬಾಸ್ ಅರಾಗ್ಚಿ | PC : X \ @IranNewsX
ಟೆಹ್ರಾನ್, ಜು.21: ಪರಮಾಣು ಕಾರ್ಯಕ್ರಮಗಳ ಬಗ್ಗೆ ಮಂಗಳವಾರ ರಶ್ಯ ಮತ್ತು ಚೀನಾದ ಜೊತೆ ಉನ್ನತ ಮಟ್ಟದ ಸಭೆ ನಡೆಸುವುದಾಗಿ ಇರಾನ್ ಸೋಮವಾರ ಹೇಳಿದೆ.
ಇರಾನಿನ ಪರಮಾಣು ಕಾರ್ಯಕ್ರಮಗಳು ಹಾಗೂ ವಿಶ್ವಸಂಸ್ಥೆಯ `ಸ್ನ್ಯಾಪ್ ಬ್ಯಾಕ್ ನಿರ್ಬಂಧಗಳ ' ಕಾರ್ಯವಿಧಾನದ ಬಗ್ಗೆ ಚರ್ಚಿಸುವ ಪ್ರಮುಖ ಉದ್ದೇಶದೊಂದಿಗೆ ಸಭೆ ನಡೆಯಲಿದೆ ಎಂದು ಇರಾನಿನ ವಿದೇಶಾಂಗ ಇಲಾಖೆಯ ವಕ್ತಾರರನ್ನು ಉಲ್ಲೇಖಿಸಿ ಇರಾನಿನ ಮಾಧ್ಯಮಗಳು ವರದಿ ಮಾಡಿವೆ. (`ಸ್ನ್ಯಾಪ್ ಬ್ಯಾಕ್' ಎಂದರೆ ಈ ಹಿಂದೆ ತೆರವುಗೊಳಿಸಿದ ಅಥವಾ ಮನ್ನಾ ಮಾಡಿದ ನಿರ್ಬಂಧಗಳ ಸ್ವಯಂಚಾಲಿತ ಮರುಸ್ಥಾಪನೆ).
ಈ ಮಧ್ಯೆ, ಪರಮಾಣು ಮಾತುಕತೆಯನ್ನು ಪುನರಾರಂಭಿಸಲು ವಿಫಲವಾದರೆ ಇರಾನಿನ ಮೇಲೆ ಅಂತರಾಷ್ಟ್ರೀಯ ನಿರ್ಬಂಧ ಮತ್ತೆ ಜಾರಿಯಾಗಬಹುದು ಎಂದು ಯುರೋಪಿಯನ್ ದೇಶಗಳು ಶುಕ್ರವಾರ ಎಚ್ಚರಿಕೆ ನೀಡಿದ್ದವು. ಬಳಿಕ ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿ ಜೊತೆ ಸಹಾಯಕ ವಿದೇಶಾಂಗ ಸಚಿವರ ಮಟ್ಟದ ಸಭೆಯಲ್ಲಿ ಪರಮಾಣು ಮಾತುಕತೆ ನಡೆಸುವುದಾಗಿ ಇರಾನ್ ಘೋಷಿಸಿತ್ತು.
ಕಳೆದ ಗುರುವಾರ ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿಯ ವಿದೇಶಾಂಗ ಸಚಿವರು ಹಾಗೂ ಯುರೋಪಿಯನ್ ಯೂನಿಯನ್ ನ ವಿದೇಶಾಂಗ ನೀತಿ ವಿಭಾಗದ ಮುಖ್ಯಸ್ಥರು ಇರಾನಿನ ವಿದೇಶಾಂಗ ಸಚಿವರ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದರು.







