ಇರಾನ್ ನಿಷ್ಠಾವಂತ ಸ್ನೇಹಿತ; ವಿಶ್ವಾಸಾರ್ಹ ಪಾಲುದಾರ: ಬೆಂಬಲ ದೃಢೀಕರಿಸಿದ ರಷ್ಯ

Photo Credit : aljazeera.com
ಮಾಸ್ಕೊ: ಅಮೆರಿಕದೊಂದಿಗಿನ ಯುದ್ಧದಲ್ಲಿ ಇರಾನ್ಗೆ ರಷ್ಯದ ಬೆಂಬಲವನ್ನು ರಷ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಶನಿವಾರ ಸಾರ್ವಜನಿಕವಾಗಿ ದೃಢಪಡಿಸಿದ್ದಾರೆ.
ಇರಾನ್ನ ಹೊಸ ವರ್ಷ ನೌರುಜ್ನ ಸಂದರ್ಭ ಸರ್ವೋಚ್ಛ ನಾಯಕ ಮೊಜ್ತಬಾ ಖಾಮಿನೈ ಹಾಗೂ ಅಧ್ಯಕ್ಷ ಮಸೂದ್ ಪೆಝೆಷ್ಕಿಯಾನ್ಗೆ ಶುಭಾಶಯ ಸಲ್ಲಿಸಿರುವ ಪುಟಿನ್ `ಕಠಿಣ ಪರೀಕ್ಷೆಯನ್ನು' ಸಹಿಸಿಕೊಳ್ಳುವಲ್ಲಿ ಇರಾನ್ನ ಜನತೆಗೆ ಶಕ್ತಿಯನ್ನು ಬಯಸುವುದಾಗಿ ಹೇಳಿದ್ದಾರೆ. ಈ ಕಠಿಣ ಸಮಯದಲ್ಲಿ ರಷ್ಯವು ಇರಾನ್ನ ನಿಷ್ಠಾವಂತ ಸ್ನೇಹಿತ ಮತ್ತು ಪ್ರಾಮಾಣಿಕ ಪಾಲುದಾರನಾಗಿ ಉಳಿಯುತ್ತದೆ ಎಂದು ಪುಟಿನ್ರನ್ನು ಉಲ್ಲೇಖಿಸಿ ರಷ್ಯದ ಮಾಧ್ಯಮಗಳು ವರದಿ ಮಾಡಿವೆ. ಇರಾನ್ಗೆ ರಷ್ಯದ ಪ್ರಾಯೋಗಿಕ ಬೆಂಬಲದ ವ್ಯಾಪ್ತಿಯ ಬಗ್ಗೆ ಚರ್ಚೆಯು ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲೇ ಪುಟಿನ್ ಅವರ ಹೇಳಿಕೆ ಹೊರಬಿದ್ದಿದೆ.
ಇರಾನ್ನ ಮೇಲಿನ ಇತ್ತೀಚಿನ ಇಸ್ರೇಲ್ ಮತ್ತು ಅಮೆರಿಕದ ದಾಳಿಯು ವಿಶಾಲ ಮಧ್ಯಪ್ರಾಚ್ಯವನ್ನು ಪ್ರಪಾತದ ಅಂಚಿಗೆ ತಳ್ಳುತ್ತಿದೆ ಮತ್ತು ವ್ಯಾಪಕ ಜಾಗತಿಕ ಇಂಧನ ಬಿಕ್ಕಟ್ಟಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ರಷ್ಯ ಆರೋಪಿಸಿದೆ. ಈ ಮಧ್ಯೆ, ಅಮೆರಿಕವು ರಷ್ಯದ ಕುರಿತ ಗುಪ್ತಚರ ಮಾಹಿತಿಯನ್ನು ಉಕ್ರೇನ್ಗೆ ಒದಗಿಸುವುದನ್ನು ನಿಲ್ಲಿಸಿದರೆ, ಅಮೆರಿಕ ಕುರಿತ ಗುಪ್ತಚರ ಮಾಹಿತಿಯನ್ನು ಇರಾನ್ಗೆ ಒದಗಿಸುವುದನ್ನು ನಿಲ್ಲಿಸುವುದಾಗಿ ರಷ್ಯ ಪ್ರಸ್ತಾಪಿಸಿದೆ ಎಂದು `ಪೊಲಿಟಿಕೊ' ವರದಿ ಮಾಡಿದೆ.





