ಇರಾನ್ ಜೈವಿಕ, ರಾಸಾಯನಿಕ ಅಸ್ತ್ರ ತಯಾರಿಕೆಗೆ ಮುಂದಾಗಿದೆ: ಟ್ರಂಪ್ ಆರೋಪ
ಅಮೆರಿಕದ ಮೇಲೆ ದಾಳಿ ನಡೆದರೆ ಇರಾನ್ನ್ನು ನಾಶಪಡಿಸುವುದಾಗಿ ಎಚ್ಚರಿಕೆ

Photo: PTI
ವಾಷಿಂಗ್ಟನ್: ಇರಾನ್ ಜೈವಿಕ ಮತ್ತು ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ತಯಾರಿಸಲು ಪ್ರಯತ್ನಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ. ಅಮೆರಿಕದ ದಾಳಿಗಳಿಂದ ಇರಾನ್ ನ ಪರಮಾಣು ಸಾಮರ್ಥ್ಯಕ್ಕೆ ಹಿನ್ನಡೆಯಾಗಿದೆ. ಹೀಗಾಗಿ, ತನ್ನ ಪರಮಾಣು ಕಾರ್ಯಕ್ರಮವನ್ನು ಮುಂದುವರಿಸುವುದು ಇರಾನ್ಗೆ ಕಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.
ಫಾಕ್ಸ್ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, ಇರಾನ್ ಈಗ ರಾಸಾಯನಿಕ ಅನಿಲಗಳು ಮತ್ತು ಜೈವಿಕ ಶಸ್ತ್ರಾಸ್ತ್ರಗಳ ತಯಾರಿಕೆಯತ್ತ ಗಮನಹರಿಸುತ್ತಿದೆ ಎಂದಿದ್ದಾರೆ. ಆದರೆ, ಈ ಆರೋಪಕ್ಕೆ ಪೂರಕವಾದ ಯಾವುದೇ ಸಾಕ್ಷ್ಯವನ್ನು ಅವರು ನೀಡಿಲ್ಲ.
ಇರಾನ್ ವಿರುದ್ಧದ ಯುದ್ಧವನ್ನು ಅಮೆರಿಕ ಆರಂಭಿಸಿಲ್ಲ ಎಂದು ಹೇಳಿರುವ ಟ್ರಂಪ್, ಈ ಸಂಘರ್ಷ 51 ವರ್ಷಗಳ ಹಿಂದೆಯೇ ಆರಂಭವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಕಳೆದ ಎಂಟು ತಿಂಗಳಲ್ಲಿ ಇರಾನ್ ಅಧಿಕಾರಿಗಳು 75,000 ಪ್ರತಿಭಟನಾಕಾರರನ್ನು ಹತ್ಯೆ ಮಾಡಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ. ಇರಾನಿಯನ್ನರು ಪ್ರತಿಭಟನೆ ನಡೆಸಲು ಬಯಸುತ್ತಿದ್ದಾರೆ. ಆದರೆ, ಭದ್ರತಾ ಪಡೆಗಳು ಗುಂಡು ಹಾರಿಸಬಹುದು ಎಂಬ ಭಯದಿಂದ ಬೀದಿಗಿಳಿಯಲು ಹಿಂದೇಟು ಹಾಕುತ್ತಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.
ಇದೇ ವೇಳೆ, ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಇರಾನ್ ದಾಳಿ ನಡೆಸುವ ಸಾಧ್ಯತೆ ಇದೆಯೇ ಮತ್ತು ಜನರು ಈ ಬಗ್ಗೆ ಆತಂಕಪಡಬೇಕೇ ಎಂಬ ಪ್ರಶ್ನೆಗೂ ಅವರು ಉತ್ತರಿಸಿದ್ದಾರೆ. ಅಂತಹ ದಾಳಿ ನಡೆಯುತ್ತದೆ ಎಂದು ತಾನು ಭಾವಿಸುವುದಿಲ್ಲ ಎಂದಿರುವ ಟ್ರಂಪ್, ಒಂದು ವೇಳೆ ದಾಳಿ ನಡೆದರೆ ಇರಾನ್ ವಿರುದ್ಧ ತೀವ್ರ ಪ್ರತೀಕಾರ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.






