ಜೋರ್ಡಾನ್ ನಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ
ಲಾರಾಕ್ ದ್ವೀಪದ ಮೇಲಿನ ದಾಳಿಗೆ IRGC ಪ್ರತೀಕಾರ

Photo: x.com/FoxNews
ಅಮ್ಮಾನ್ : ದಕ್ಷಿಣ ಇರಾನ್ ನ ಲಾರಾಕ್ ದ್ವೀಪದ ಮೇಲೆ ಅಮೆರಿಕ ರವಿವಾರ ನಡೆಸಿದ ದಾಳಿಗೆ ಪ್ರತೀಕಾರವಾಗಿ, ಜೋರ್ಡಾನ್ ನಲ್ಲಿರುವ ಅಮೆರಿಕದ ಎರಡು ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿರುವುದಾಗಿ ಇರಾನ್ ತಿಳಿಸಿದೆ. ಜುಲೈ ಬಳಿಕ ಉಭಯ ದೇಶಗಳ ನಡುವೆ ನಡೆದಿರುವ ಮೊದಲ ಪ್ರಮುಖ ಸಂಘರ್ಷ ಇದಾಗಿದೆ.
ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC)ಯು ಕ್ಷಿಪಣಿ ಮತ್ತು ಡ್ರೋನ್ ಮೂಲಕ ದಾಳಿ ನಡೆಸಿದೆ. ಜೋರ್ಡಾನ್ ನಲ್ಲಿರುವ ಕಿಂಗ್ ಹುಸೇನ್ ಮತ್ತು ಅಲ್ ಅಝ್ರಾಕ್ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಇರಾನ್ ನ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಈ ದಾಳಿಯನ್ನು ಆಕ್ರಮಣಕಾರರಿಗೆ ಶಿಕ್ಷೆ ಎಂದು ಬಣ್ಣಿಸಿರುವ IRGC, ದಾಳಿಯಿಂದಾಗಿ ಶತ್ರುಪಡೆಯ ತಾಂತ್ರಿಕ ಹಾಗೂ ದುರಸ್ತಿ ಮೂಲಸೌಕರ್ಯಗಳು ಮತ್ತು ಯುದ್ಧ ವಿಮಾನ ನಿಯೋಜನಾ ತಾಣಗಳು ನಾಶವಾಗಿದ್ದು, ಭಾರಿ ಹಾನಿಯಾಗಿದೆ ಎಂದು ಹೇಳಿದೆ.
ಹಾರ್ಮುಝ್ ಜಲಸಂಧಿಯ ಮೇಲಿನ ಇರಾನ್ ನ ನಿಯಂತ್ರಣವನ್ನು ದುರ್ಬಲಗೊಳಿಸಲು ಶತ್ರುಗಳು ಯತ್ನಿಸುತ್ತಿದ್ದು, ಪ್ರತಿಯೊಂದು ದಾಳಿಗೂ ಇನ್ನೂ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಇರಾನ್ ಎಚ್ಚರಿಸಿದೆ.
ಮತ್ತೊಂದೆಡೆ, ಜೋರ್ಡಾನ್ ವಾಯುಪ್ರದೇಶವನ್ನು ಪ್ರವೇಶಿಸಿದ ಎಂಟು ಕ್ಷಿಪಣಿಗಳನ್ನು ತನ್ನ ವಾಯು ರಕ್ಷಣಾ ವ್ಯವಸ್ಥೆಯು ಸೋಮವಾರ ಮುಂಜಾನೆ ಹೊಡೆದುರುಳಿಸಿದೆ ಎಂದು ಜೋರ್ಡಾನ್ ಸೇನೆ ತಿಳಿಸಿದೆ.
ಈ ದಾಳಿಗಳಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.
ಇದಕ್ಕೂ ಮುಂಚೆ , ಲಾರಾಕ್ ದ್ವೀಪದ ಮೇಲೆ ಅಮೆರಿಕ ದಾಳಿ ನಡೆಸಿತ್ತು. ಈ ಬಗ್ಗೆ ಅಲ್ ಜಝೀರಾ ಗೆ ಪ್ರತಿಕ್ರಿಯಿಸಿದ್ದ ಅಮೇರಿಕಾ ಅಧಿಕಾರಿಯೊಬ್ಬರು , ಹಾರ್ಮುಝ್ ಜಲಸಂಧಿಯ ಕಡೆಗೆ ಸ್ಪೋಟಕಗಳನ್ನು ಹೊತ್ತ ರಾಕೆಟ್ ಗಳನ್ನು ಉಡಾಯಿಸಲು ಸಜ್ಜಾಗಿದ್ದ ಲಾಂಚರ್ ಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ ಎಂದು ಹೇಳಿದ್ದರು.
ಅಮೆರಿಕ-ಇಸ್ರೇಲ್ ಪಡೆಗಳು ನಡೆಸಿದ ಈ ದಾಳಿಯಲ್ಲಿ ಇರಾನ್ ಸೈನಿಕರು ಮೃತಪಟ್ಟಿದ್ದಾರೆ ಮತ್ತು ಕೆಲವರು ಗಾಯಗೊಂಡಿದ್ದಾರೆ ಎಂದು ಇರಾನ್ ನ ಫಾರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.






