ಕ್ಷಿಪಣಿ ವ್ಯಾಪ್ತಿಯ ಮೇಲೆ ಸ್ವಯಂ ವಿಧಿಸಿದ್ದ ಮಿತಿ ತೆರವು: ಇರಾನ್

Photo Credit : PTI
ಟೆಹರಾನ್: ಇರಾನ್ ತನ್ನ ಬ್ಯಾಲಿಸ್ಟಿಕ್ ಕ್ಷಿಪಣಿಗಳ ವ್ಯಾಪ್ತಿಯ ಮೇಲೆ ಸ್ವಯಂ-ವಿಧಿಸಿಕೊಂಡ 2,000 ಕಿಲೋಮೀಟರ್ ಮಿತಿಯನ್ನು ತೆರವುಗೊಳಿಸಿದೆ ಎಂದು ಇರಾನ್ನ ರೆವಲ್ಯೂಷನರಿ ಗಾರ್ಡ್ (ಐಆರ್ಜಿಸಿ) ಹೇಳಿದೆ. ಹೊಸದಾಗಿ ಮತ್ತೆ ಯುದ್ಧದ ಭೀತಿ ಹೆಚ್ಚಾಗುತ್ತಿರುವುದರಿಂದ, ದೇಶವು ದೂರದ ಗುರಿಗಳನ್ನು ತಲುಪಬಲ್ಲ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಲು ಯತ್ನಿಸಬಹುದು ಎಂಬುದನ್ನು ಇದು ಸೂಚಿಸುತ್ತದೆ.
ಅಮೆರಿಕ ಅಥವಾ ಇಸ್ರೇಲ್ನಿಂದ ಬರುವ `ಯಾವುದೇ ರೀತಿಯ ಮತ್ತು ಯಾವುದೇ ಮಟ್ಟದ ಬೆದರಿಕೆಗೆ' ಭೌಗೋಳಿಕ ಗಡಿಗಳಿಲ್ಲದೆ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ಇರಾನ್ನ ಅತ್ಯುನ್ನತ ನಾಯಕ ಮುಜ್ತಬಾ ಖಾಮಿನೈ ಎಚ್ಚರಿಸಿದ ಬೆನ್ನಲ್ಲೇ ಐಆರ್ಜಿಸಿ ವಕ್ತಾರರಿಂದ ಈ ಹೇಳಿಕೆ ಬಂದಿದೆ. ಇರಾನ್ ಬಳಿ 2,000 ಕಿಲೋಮೀಟರ್ಗಿಂತಲೂ ಹೆಚ್ಚಿನ ವ್ಯಾಪ್ತಿಯ ಕ್ಷಿಪಣಿಗಳಿವೆಯೇ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಆದರೆ ಇರಾನ್ನ ಬಾಹ್ಯಾಕಾಶ ಕಾರ್ಯಕ್ರಮದ ತಂತ್ರಜ್ಞಾನವನ್ನು ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ನಿರ್ಮಿಸಲು ಮರುಬಳಕೆ ಮಾಡಬಹುದು ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.




