ಖತರ್ನ ಎಲ್ಎನ್ಜಿ ಟ್ಯಾಂಕರ್ ಮೇಲೆ ಇರಾನ್ ಕ್ಷಿಪಣಿ ದಾಳಿ: ವರದಿ

ಸಾಂದರ್ಭಿಕ ಚಿತ್ರ | Photo Credit : AP
ದೋಹ, ಜು.7: ಹಾರ್ಮುಝ್ ಜಲಸಂಧಿಯ ಮೂಲಕ ಸಾಗುತ್ತಿದ್ದ ಖತರ್ ನ ಎಲ್ಎನ್ಜಿ ಟ್ಯಾಂಕರ್ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು ಟ್ಯಾಂಕರ್ ಸ್ಫೋಟಗೊಳ್ಳುವ ಅಪಾಯದಲ್ಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
ಜಲಸಂಧಿಯಲ್ಲಿರುವ ಒಮಾನ್ನ ಲಿಮಾಹ್ ಬಳಿ ಸೋಮವಾರ ತಡರಾತ್ರಿ ಟ್ಯಾಂಕರ್ `ಅಲ್ ರೆಕಾಯತ್'ನ ಮೇಲೆ ದಾಳಿ ನಡೆದಿದೆ. ಹಾರ್ಮುಝ್ ಜಲಸಂಧಿಯಿಂದ ದಕ್ಷಿಣದ ಕಡೆಗೆ ಒಮಾನ್ ಕೊಲ್ಲಿಯತ್ತ ಸಾಗಲು ಪ್ರಯತ್ನಿಸುತ್ತಿದ್ದಾಗ, ಹಡಗಿನ ಎಡಭಾಗಕ್ಕೆ ಕ್ಷಿಪಣಿ ಬಂದು ಅಪ್ಪಳಿಸಿದೆ ಎಂದು ಯುಕೆ ಮಾರಿಟೈಮ್ ಟ್ರೇಡ್ ಆಪರೇಷನ್ಸ್ (ಯುಕೆಎಂಟಿಒ) ವರದಿ ಮಾಡಿದೆ.
ದಾಳಿಯಲ್ಲಿ ಅಲ್-ರೆಕಾಯತ್ ತೀವ್ರವಾಗಿ ಹಾನಿಗೊಳಗಾಗಿದೆ. ಟ್ಯಾಂಕರ್ ನ ಎಂಜಿನ್ ಕೋಣೆಯಲ್ಲಿ ಕಾಣಿಸಿಕೊಂಡಿರುವ ಬೆಂಕಿಯಿಂದಾಗಿ ಅದು ಸ್ಫೋಟಗೊಳ್ಳುವ ಅಪಾಯದಲ್ಲಿದೆ . ಟ್ಯಾಂಕರ್ನಲ್ಲಿ ಎಲ್ಎನ್ಜಿ ತುಂಬಿಸಲಾಗಿತ್ತು ಮತ್ತು ಅದರ ಎಡಭಾಗಕ್ಕೆ ದಾಳಿಯಾದ ನಂತರ ಅದು ಸಹಾಯಕ್ಕಾಗಿ ತುರ್ತು ಸಂಕೇತಗಳನ್ನು ಕಳುಹಿಸಿತ್ತು. ಹಡಗಿನಲ್ಲಿದ್ದ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ವರದಿ ತಿಳಿಸಿದೆ.
ಫೆಬ್ರವರಿ ಕೊನೆಯಲ್ಲಿ ಇರಾನ್ ಯುದ್ಧ ಪ್ರಾರಂಭವಾದ ನಂತರ, ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಗಳಲ್ಲಿ ಮಧ್ಯಸ್ಥಗಾರನಾಗಿರುವ ಖತರ್ ನ ಎಲ್ಎನ್ಜಿ ಹಡಗಿನ ಮೇಲೆ ದಾಳಿ ನಡೆದಿರುವುದು ಇದೇ ಮೊದಲು.
ಎರಡು ಹಡಗುಗಳ ಮೇಲೆ ದಾಳಿ: ಅಮೆರಿಕ
ಇರಾನ್ ಸೇನೆಯು ಒಮಾನ್ ಬಳಿ ಹಾರ್ಮುಝ್ ಜಲಸಂಧಿಯ ಮೂಲಕ ಸಾಗುತ್ತಿದ್ದ ವಾಣಿಜ್ಯ ಹಡಗಿನ ಮೇಲೆ ಕನಿಷ್ಠ ಎರಡು ಕ್ಷಿಪಣಿಗಳನ್ನು ಹಾರಿಸಿದೆ. ಮತ್ತೊಂದು ಹಡಗಿನ ಮೇಲೂ ದಾಳಿ ನಡೆದಿದ್ದು, ಎರಡೂ ಹಡಗುಗಳು ತೀವ್ರವಾಗಿ ಜಖಂಗೊಂಡಿವೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಮೆರಿಕದ ಇಬ್ಬರು ಅಧಿಕಾರಿಗಳು ಆರೋಪಿಸಿರುವುದಾಗಿ `ಆಕ್ಸಿಯೋಸ್' ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸರಣಿ ಎಚ್ಚರಿಕೆ ನಿರ್ಲಕ್ಷಿಸಿದ್ದರಿಂದ ದಾಳಿ : ಇರಾನಿನ ಮಾಧ್ಯಮಗಳ ಪ್ರತಿಪಾದನೆ
ಹಾರ್ಮುಝ್ ಜಲಸಂಧಿಯ ಬಳಿ ಒಮಾನ್ ಕರಾವಳಿಯಲ್ಲಿದ್ದ ತೈಲ ಟ್ಯಾಂಕರ್ ಒಂದರ ಮೇಲೆ ದಾಳಿ ನಡೆಸಲಾಗಿದೆ. ಈ ಹಡಗು ಅಮೆರಿಕ ನೌಕಾಪಡೆಯ ಬೆಂಬಲದೊಂದಿಗೆ ಒಮಾನ್ ಜಲಪ್ರದೇಶದ ದಕ್ಷಿಣ ಮಾರ್ಗದ ಮೂಲಕ ಆಯಕಟ್ಟಿನ ಜಲಸಂಧಿಯನ್ನು ದಾಟಲು ಪ್ರಯತ್ನಿಸಿತ್ತು ಮತ್ತು ಇರಾನ್ ಅಧಿಕಾರಿಗಳ ಸರಣಿ ಎಚ್ಚರಿಕೆಗಳನ್ನು ನಿರ್ಲಕ್ಷಿಸಿತ್ತು ಎಂದು ಇರಾನಿನ ಸರಕಾರಿ ಸ್ವಾಮ್ಯದ ಮಾಧ್ಯಮಗಳು ಪ್ರತಿಪಾದಿಸಿವೆ.
ಎಲ್ಲಾ ವಾಣಿಜ್ಯ ಹಡಗುಗಳು ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗುವಾಗ ಇರಾನ್ ಸೇನೆಯೊಂದಿಗೆ ಸಮನ್ವಯ ಸಾಧಿಸಬೇಕು ಎಂದು ನಿರ್ದೇಶನ ನೀಡಲಾಗಿತ್ತು. ಆದರೆ ಈ ನಿಯಮವನ್ನು ಮೀರಿ ಒಮಾನ್ ಜಲಪ್ರದೇಶದ ದಕ್ಷಿಣ ಮಾರ್ಗವನ್ನು ಬಳಸಿದ ಕಾರಣಕ್ಕಾಗಿ ಈ ಟ್ಯಾಂಕರ್ ಅನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ. ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ ನಂತರವೇ ಈ ಟ್ಯಾಂಕರ್ ಮೇಲೆ ದಾಳಿ ನಡೆದಿದೆ ಎಂದು ಇರಾನ್ನ ದೂರದರ್ಶನ ವರದಿ ಮಾಡಿದೆಯಾದರೂ, ಇರಾನ್ ಈ ದಾಳಿಯ ಜವಾಬ್ದಾರಿಯನ್ನು ನೇರವಾಗಿ ಹೊತ್ತುಕೊಂಡಿಲ್ಲ.






